ಕಳೆದ 24 ತಾಸುಗಳಲ್ಲಿ ಮುಂಬೈಯಲ್ಲಿ ಮೂರು ಮತ್ತು ಪುಣೆ, ಚೆನ್ನೈಯಲ್ಲಿ ತಲಾ ಒಬ್ಬೊಬ್ಬರು ಎಚ್1ಎನ್1 ಸೋಂಕಿಗೆ ಬಲಿಯಾಗುವುದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 55ಕ್ಕೇರಿದೆ.
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಹೆಬ್ಬೂರಿನ ಗಾಯತ್ರಿ (26) ಎಂಬ ಮಹಿಳೆ ಸಾವನ್ನಪ್ಪಿದ್ದು, ಹಂದಿಜ್ವರಕ್ಕೆ ಇದುವರೆಗೆ ಕರ್ನಾಟಕದಲ್ಲಿ ಬಲಿಯಾದವರ ಸಂಖ್ಯೆ 12.
ತುಮಕೂರು ಜಿಲ್ಲೆ ಹೆಬ್ಬೂರಿನ ಗಾಯತ್ರಿ ಎಂಬ ಮಹಿಳೆ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ತೀವ್ರ ಉಸಿರಾಟದಿಂದ ತೊಂದರೆ ಮತ್ತಿತರ ಸಮಸ್ಯೆಯಿಂದ ಬಳಲುತ್ತಿದ್ದ ಈಕೆಯನ್ನು ನಗರದ ಕೆಂಪೇಗೌಡ ಆಸ್ಪತ್ರೆಗೆ (ಕಿಮ್ಸ್) ದಾಖಲಾಗಿದ್ದರು. ಈಕೆಗೆ ಟ್ಯಾಮಿಫ್ಲೂ ಮಾತ್ರೆಯನ್ನು ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ.
ತಮಿಳುನಾಡಿನಲ್ಲಿ.. ತಮಿಳುನಾಡಿನಲ್ಲಿ ಹಂದಿಜ್ವರಕ್ಕೆ ಮೂರನೇ ಬಲಿಯಾಗಿದೆ. ಚೆನ್ನೈ ನಿವಾಸಿ ಶೇಖರ್ (45) ಎಂಬ ವ್ಯಕ್ತಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಆಗಸ್ಟ್ 12ರಂದು ದಾಖಲಾಗಿದ್ದರು. ನಿರುದ್ಯೋಗಿಯಾಗಿದ್ದ ಅವರು ಜ್ವರ ಮತ್ತು ಮೂಲವ್ಯಾಧಿ ಲಕ್ಷಣಗಳನ್ನು ಹೊಂದಿದ್ದರು.
ಶೇಖರ್ ಆರೋಗ್ಯಸ್ಥಿತಿ ಹದಗೆಡಲಾರಂಭಿಸಿದಾಗ ಆಗಸ್ಟ್ 17ರಂದು ಟ್ಯಾಮಿಫ್ಲೂ ಮಾತ್ರೆಯನ್ನು ಅವರಿಗೆ ನೀಡಲಾಯಿತು. ಅಲ್ಲದೆ ಅವರ ಗಂಟಲು ಮಾದರಿಯನ್ನು ಕೂಡ ಪರೀಕ್ಷೆಗೆಂದು ಕಳುಹಿಸಿಕೊಡಲಾಗಿತ್ತು. ಅದರಲ್ಲಿ ಅವರಿಗೆ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಶುಕ್ರವಾರ ರಾತ್ರಿ ಅವರು ಕುಸಿದು ಬಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ... ಮಹಾನಗರಿಯಲ್ಲಿ ಸೋಂಕಿಗೆ ಮತ್ತೆ ಮೂರು ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಎಚ್1ಎನ್1ಗೆ ಬಲಿಯಾದವರ ಸಂಖ್ಯೆ 34ಕ್ಕೇರಿದೆ.
ಎರಡು ತಿಂಗಳ ಮಗು, 12 ವರ್ಷದ ಬಾಲಕಿ ಮತ್ತು 37 ವರ್ಷದ ಮಹಿಳೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದು, ಟ್ಯಾಮಿಫ್ಲೂ ಮಾತ್ರೆಗಳನ್ನು ನೀಡಿದರೂ ಅವರು ಚೇತರಿಸಿಕೊಳ್ಳಲಿಲ್ಲ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರ್ವರಿ ಗೋಖಲೆ ತಿಳಿಸಿದ್ದಾರೆ.
ಪುಣೆಯಲ್ಲಿ 60 ವರ್ಷದ ವೃದ್ಧೆಯೊಬ್ಬರು ಶನಿವಾರ ಸಾವನ್ನಪ್ಪಿದ್ದು, ಈ ನಗರದಲ್ಲಿ ಹಂದಿಜ್ವರಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 20ಕ್ಕೇರಿದೆ. ಅವರು ಇತರ ಕೆಲವು ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.