ಎಲ್‌ಟಿಟಿಇ ವಿರುದ್ಧದ ಹೋರಾಟಕ್ಕಾಗಿ ಯಾವುದೇ ಆಕ್ರಮಣಕಾರಿ ಯುದ್ಧ ಸಾಮಗ್ರಿಗಳನ್ನು ಶ್ರೀಲಂಕಾಕ್ಕೆ ನೀಡಲು ಭಾರತವು ಬಹಿರಂಗವಾಗಿ ನಿರಾಕರಿಸಿರುವ ಹೊರತಾಗಿಯೂ, ದ್ವೀಪರಾಷ್ಟ್ರದ ಗೆಲುವಿಗಾಗಿ ಭಾರತ ಸಹಾಯ ಮಾಡಿದೆ ಎಂದು ಲೇಖಕರೊಬ್ಬರು ತನ್ನ ಪುಸ್ತಕದಲ್ಲಿ ತಿಳಿಸಿದ್ದಾರೆ.
ಎನ್‌ಡಿಟಿವಿಯ ರಕ್ಷಣೆ ಮತ್ತು ತಂತ್ರಗಾರಿಕಾ ವ್ಯವಹಾರಗಳ ಸಂಪಾದಕ ನಿತಿನ್ ಗೋಖಲೆಯವರು ಬರೆದಿರುವ 'ಶ್ರೀಲಂಕಾ, ಯುದ್ಧದಿಂದ ಶಾಂತಿಯೆಡೆಗೆ' ಎಂಬ ಪುಸ್ತಕದಲ್ಲಿ ಈ ವಿವರಣೆಗಳಿವೆ.
ಶ್ರೀಲಂಕಾಕ್ಕೆ ಎಲ್‌ಟಿಟಿಇ ಯುದ್ಧದ ವಿಚಾರದಲ್ಲಿ ಭಾರತವು ಬಹಿರಂಗ ಸಹಕಾರ ನೀಡಿರದಿದ್ದರೂ, ಹಲವು ರಹಸ್ ಮಾಹಿತಿಗಳನ್ನು ನೀಡುವ ಮೂಲಕ ಸಹಕರಿಸಿದೆ. ಭಾರತ-ಶ್ರೀಲಂಕಾ ಕರಾವಳಿ ಪ್ರದೇಶದಲ್ಲಿನ ಎಲ್‌ಟಿಟಿಇ ಚಟುವಟಿಕೆಗಳ ಮಾಹಿತಿಯನ್ನು ಭಾರತ ನೀಡಿದೆ.
ಎಲ್‌ಟಿಟಿಇಯ 12ಕ್ಕೂ ಹೆಚ್ಚು ಯುದ್ಧ ನೌಕೆಗಳ ಮಾಹಿತಿಯನ್ನು ಶ್ರೀಲಂಕಾಕ್ಕೆ ಭಾರತ ನೀಡಿತ್ತು. ಇದೇ ಸುಳಿವಿನ ಆಧಾರದಲ್ಲಿ ಲಂಕಾ ಅವುಗಳನ್ನು ನಾಶ ಮಾಡಿತ್ತು. ಡಿಎಂಕೆ ಜತೆ ಮೈತ್ರಿ ಹೊಂದಿದ್ದ ಕಾರಣ ಶ್ರೀಲಂಕಾಕ್ಕೆ ನೇರ ಸಹಕಾರ ನೀಡದಿದ್ದರೂ ಪರೋಕ್ಷವಾಗಿ ಬೆಂಬಲ ಸೂಚಿಸಿತ್ತು. ಭಾರತದಿಂದಾಗಿಯೇ ಶ್ರೀಲಂಕಾವು ಎಲ್‌ಟಿಟಿಇ ವಿರುದ್ಧ ಜಯ ಸಾಧಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಎಲ್‌ಟಿಟಿಇ ವಿಚಾರದಲ್ಲಿ ಭಾರತ ಮತ್ತು ಶ್ರೀಲಂಕಾಗಳು 2006ರಿಂದ 2009ರವರೆಗೆ ಅತ್ಯುತ್ತಮ ಸಹಕಾರ ಹೊಂದಿದ್ದ ಕಾರಣದಿಂದಾಗಿ ಎಲ್‌ಟಿಟಿಇಯ ಬೆನ್ನೆಲುಬು ಮುರಿಯಲು ಸಾಧ್ಯವಾಗಿತ್ತು ಎಂದು ತನ್ನ ಪುಸ್ತಕದಲ್ಲಿ ಗೋಖಲೆ ತಿಳಿಸಿದ್ದಾರೆ.
ಶ್ರೀಲಂಕಾ ನೌಕಾಪಡೆಗೆ 2002ರಲ್ಲಿ ಭಾರತವು ಸುಕನ್ಯ ದರ್ಜೆಯ ಗಸ್ತು ಹಡಗನ್ನು ನೀಡಿತ್ತು. ಅದರ ನಂತರ 2006ರಲ್ಲಿ ಎಂಐ-17 ಮಾದರಿಯ ಐದು ಹೆಲಿಕಾಫ್ಟರುಗಳನ್ನು ಕೂಡ ಭಾರತವು ಶ್ರೀಲಂಕಾಕ್ಕೆ ಉಡುಗೊರೆ ನೀಡಿತ್ತು ಎಂದು ಅವರು ವಿವರಿಸಿದ್ದಾರೆ.
ಭಾರತವು ರಹಸ್ಯವಾಗಿ ಶ್ರೀಲಂಕಾ ನೌಕಾಪಡೆಗೆ ಸಹಾಯ ಮಾಡಿದ್ದರೆ, ಅತ್ತ ಪಾಕಿಸ್ತಾನ ಮತ್ತು ಚೀನಾಗಳು ವಾಯು ಸೇನೆಗೆ ಸಹಕಾರ ನೀಡಿದ್ದವು. ಪಾಕಿಸ್ತಾನವು ಶ್ರೀಲಂಕಾದ ವಾಯು ಸೇನೆಯ ಸಿಬಂದಿಗೆ ನಿರ್ವಹಣೆ ತರಬೇತಿ ನೀಡಿತ್ತು. ಅಗತ್ಯ ಸಂದರ್ಭದಲ್ಲಿ ಚೀನಾ ಪರಿಕರಗಳನ್ನು ರವಾನಿಸಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.