ದೆಹಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ಜಾರ್ಖಂಡ್‌ನ ಲತೇಹರ್ ಜಿಲ್ಲೆಯ ಮೂಲಕ ಹಾದು ಹೋದ ಹತ್ತೇ ನಿಮಿಷದಲ್ಲಿ ರೈಲ್ವೇ ಹಳಿಯನ್ನು ಮಾವೋವಾದಿಗಳು ಸ್ಫೋಟಿಸಿದ್ದು, ಅಲ್ಪ ಅಂತರದಿಂದ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಜಾರ್ಖಂಡ್ ಸೇರಿದಂತೆ ಐದು ರಾಜ್ಯಗಳಲ್ಲಿ ಮಾವೋವಾದಿಗಳು 48 ಗಂಟೆಗಳ ಬಂದ್ ಆರಂಭಿಸಿದ್ದು, ಸೋಮವಾರ ಬೆಳಿಗ್ಗೆ 7.30ಕ್ಕೆ ಈ ಘಟನೆ ನಡೆದಿದೆ.
ರಾಂಚಿಯಿಂದ 150 ಕಿಲೋ ಮೀಟರ್ ದೂರದಲ್ಲಿರುವ ಕುಮುಂದಿ ಮತ್ತು ಹೇಹೇಗರ್ ರೈಲ್ವೇ ನಿಲ್ದಾಣಗಳ ನಡುವೆ ಸುಮಾರು 20 ನಕ್ಸಲರನ್ನೊಳಗೊಂಡ ತಂಡವು ರೈಲ್ವೇ ಹಳಿಗಳನ್ನು ಸ್ಫೋಟಿಸಿತು ಎಂದು ಲತೇಹರ್ ರೈಲ್ವೇ ಸ್ಟೇಷನ್ ಮಾಸ್ಟರ್ ಪಿ.ಎನ್. ತಿವಾರಿ ತಿಳಿಸಿದ್ದಾರೆ.
ಈ ಸ್ಫೋಟದಿಂದಾಗಿ ಬರ್ವಾದಿಹ್ - ಬರ್ಕಾಕಾನಾ ಮಾರ್ಗಗಳ ರೈಲು ಸಂಚಾರಕ್ಕೂ ಅಡಚಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಪಿಐ(ಮಾವೋವಾದಿ) ಗುಂಪಿನ ಇಬ್ಬರು ಹಿರಿಯ ಸದಸ್ಯರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಮಾವೋವಾದಿಗಳು ಜಾರ್ಖಂಡ್, ಒರಿಸ್ಸಾ, ಪಶ್ಚಿಮ ಬಂಗಾಲ, ಛತ್ತೀಸ್‌ಗಢ ಮತ್ತು ಬಿಹಾರಗಳಲ್ಲಿ ಬಂದ್‌ಗೆ ಕರೆಕೊಟ್ಟಿದ್ದು, ಭಾರೀ ಹಿಂಸಾಚಾರಗಳು ನಡೆಯುವ ಸಾಧ್ಯತೆಗಳಿವೆ.
ರೈಲ್ವೇ ಹಳಿ ಸ್ಫೋಟವಲ್ಲದೆ ಈಗಾಗಲೇ ಇಲ್ಲಿನ ಪಾಲಮಾವು ಜಿಲ್ಲೆಯಲ್ಲಿ ಮೊಬೈಲ್ ಟವರ್ ಒಂದನ್ನು ಕೂಡ ನಕ್ಸಲು ಸ್ಫೋಟಿಸಿದ್ದಾರೆ.
ಜಿಲ್ಲೆಯ ಔರಂಗಾಬಾದ್- ಮೇದಿನಿನಗರ್ ಮಾರ್ಗದಲ್ಲಿನ ಟವರ್ ಬಳಿ ತೆರಳಿದ 50 ಶಸ್ತ್ರಸಜ್ಜಿತ ನಕ್ಸಲರು, ಟವರ್‌ನತ್ತ ಸ್ಫೋಟಕಗಳನ್ನೆಸೆದು ಧ್ವಂಸಗೈದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟದಿಂದಾಗಿ ನೆಲದಲ್ಲಿ ಬೃಹತ್ ಹೊಂಡವೇ ಸೃಷ್ಟಿಯಾಗಿದೆ. ಅವಘಡ ನಡೆದ ಸ್ಥಳ ರಾಂಚಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿದೆ.
ಆಗಸ್ಟ್ 19ರಂದು ಅನಿಲ್ ಮತ್ತು ಕಾರ್ತಿಕ್ ಎಂಬ ಇಬ್ಬರು ಹಿರಿಯ ಮಾವೋವಾದಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನಕ್ಸಲರು ಆರೋಪಿಸಿ ಐದು ರಾಜ್ಯಗಳಲ್ಲಿ ಬಂದ್‌ಗೆ ಕರೆಕೊಟ್ಟಿದ್ದರು.