ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿಧಾನವಾಗಿ ಡ್ರೈವ್ ಮಾಡು ಅಂದಿದ್ದೇ ತಪ್ಪಾಯ್ತ: ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿದ ಯುವಕ (Drive | man thrash | cancer patient | Woman)
ನಿಧಾನವಾಗಿ ಡ್ರೈವ್ ಮಾಡು ಅಂದಿದ್ದೇ ತಪ್ಪಾಯ್ತ: ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿದ ಯುವಕ
ನವದೆಹಲಿ, ಸೋಮವಾರ, 24 ಆಗಸ್ಟ್ 2009( 10:44 IST )
"ಸ್ವಲ್ಪ ನಿಧಾನವಾಗಿ ಡ್ರೈವ್ ಮಾಡಪ್ಪ" ಎಂಬುದಾಗಿ 'ಬಿಸಿ ರಕ್ತದ' ತರುಣನೊಬ್ಬನಿಗೆ ಹೇಳಿದ್ದೇ ದೊಡ್ಡ ಅಪರಾಧವಾಗಿದ್ದು, ಆತ ವಯಸ್ಸಾದ ಆ ಕ್ಯಾನ್ಸರ್ ಪೀಡಿತ ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿ ಅಟ್ಟಹಾಸ ಮೆರೆದ ದುರ್ಘಟನೆ ಪಶ್ಚಿಮ ದೆಹಲಿಯ ಪಶ್ಚಿಮ ವಿಹಾರದಲ್ಲಿ ಸಂಭವಿಸಿದೆ.
ಕಿರಣ್ ಆನಂದ್(58) ಎಂಬವರು ತಮ್ಮ ಪುತ್ರಿ ಅನಿಶಾ(20)ಳೊಂದಿಗೆ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದರು. ಟ್ರಾಫಿಕ್ ಸಿಗ್ನಲ್‌ನಲ್ಲಿ ಅನಿಶಾ ತಾನು ಚಲಾಯಿಸುತ್ತಿದ್ದ ಸ್ಕೂಟಿಯನ್ನು ನಿಲ್ಲಿಸಿದ್ದ ವೇಳೆ ಆಲ್ಟೋ ಕಾರಿನಲ್ಲಿ ಹಿಂದಿನಿಂದ ಅತ್ಯಂತ ವೇಗಾವಾಗಿ ಬಂದ ವ್ಯಕ್ತಿ ಸ್ಕೂಟಿಯ ತುಂಬ ಸನಿಹಕ್ಕೆ ಬಂದು ಸ್ಕೂಟಿಗೆ ತಾಗುವಂತೆ ಬ್ರೇಕ್ ಹಾಕಿದ.
ಸಿಗ್ನಲ್ ಕೆಂಪುದೀಪವನ್ನು ತೋರಿಸುತ್ತಿದ್ದರೂ ಕಾರಿನಲ್ಲಿದ್ದ ಯುವಕ ಹಾರ್ನ್ ಮಾಡಲು ಆರಂಭಿಸಿದ. ಅಷ್ಟರಲ್ಲಿ ಕಿರಣ್ ಅವರು ಹಾರ್ನ್ ಹಾಕುವುದನ್ನು ನಿಲ್ಲಿಸುವಂತೆ ಮತ್ತು ಜಾಗರೂಕತೆಯಿಂದ ಡ್ರೈವ್ ಮಾಡುವಂತೆ ಆ ಹುಡುಗನಿಗೆ ಹೇಳಿದ್ದೇ ಅಪರಾಧವಾಗಿದ್ದು, ಮಹಿಳೆಯೊಂದಿಗೆ ವಾದಕ್ಕಿಳಿದ ಆತ, ಕಾರಿನಿಂದಿಳಿದು ಮಹಿಳೆಯ ಕಪಾಳಕ್ಕೆ ಬಾರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ. ಕಿರಣ್ ಅವರು ಕೆಳಕ್ಕೆ ಬೀಳುತ್ತಲೇ ಅವರನ್ನು ರಸ್ತೆಯಲ್ಲಿ ಸುಮಾರು 20 ಮೀಟರ್ ದೂರದಷ್ಟು ಎಳೆದಾಡಿದ್ದು, ಮತ್ತೂ ಅವರನ್ನು ಥಳಿಸಿದ ಎಂಬುದಾಗಿ ಅವರು ಹೇಳಿದ್ದಾರೆ.
ತನ್ನ ತಾಯಿಯ ಮೇಲೆ ಹಲ್ಲೆ ನಡೆಯುತ್ತಿರುವ ವೇಲೆ ಸಹಾಯಕ್ಕಾಗಿ ಅನಿಶಾ ಕೂಗಾಡಿದರೂ ಯೂರೂ ಸಹಾಯ ಮಾಡಿಲ್ಲ ಎಂದು ಆಕೆ ದೂರಿದ್ದಾಳೆ. ಆಕೆ ಕಾರಿನ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದು ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಅಶು ಶೋಕೀನ್(22) ಎಂಬ ಯುವಕ ಕಾರನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ತಲೆತಪ್ಪಿಸಿಕೊಂಡಿದ್ದಾನೆ ಎಂದು ಡಿಸಿಪಿ ಶರದ್ ಅಗರ್ವಾಲ್ ಹೇಳಿದ್ದು ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆಯನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಅವರನ್ನು ಖಾಸಗೀ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.