ಅಕ್ರಮ ನುಸುಳುವಿಕೆ ಹಾಗೂ ತನ್ನ ನೆಲದಲ್ಲಿರುವ ಉಗ್ರರ ನೆಲೆಗಳನ್ನು ಪಾಕಿಸ್ತಾನವು ಧ್ವಂಸ ಮಾಡುವ ತನಕ ಪಾಕಿಸ್ತಾನದೊಂದಿಗೆ 'ಅರ್ಥಪೂರ್ಣವಾದ ಮಾತುಕತೆ' ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದಾರೆ
ಭಾರತವು ಪಾಕಿಸ್ತಾನದೊಂದಿಗಿನ ಭಿನ್ನತೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸುತ್ತಿದೆ ಮತ್ತು ಅರ್ಥಪೂರ್ಣ ಮಾತುಕತೆಗೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಧನಾತ್ಮಕವಾಗಿ ವೃದ್ಧಿಸುವಲ್ಲಿ ಭಾರತದ ಸಿದ್ಧತೆಯ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ ಎಂದು ಅವರು ನುಡಿದರು. ಸಚಿವರು ಭಾರತದ ರಾಯಭಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಭಾರತದ ವಿರುದ್ಧ ಉಗ್ರಗಾಮಿ ಚಟುವಟಿಕೆಗಳನ್ನು ತನ್ನ ನೆಲದಲ್ಲಿ ನಡೆಸಲು ಅವಕಾಶ ನೀಡುವುದಿಲ್ಲ ಎಂಬ ತನ್ನ ಬದ್ಧತೆಯನ್ನು ಪಾಕಿಸ್ತಾನವು ಪೂರ್ಣಗೊಳಿಸಿದರೆ ಮಾತ್ರ ಅರ್ಥವತ್ತಾದ ಮಾತುಕತೆ ಸಾಧ್ಯ, ಪಾಕಿಸ್ತಾನವು ತನ್ನ ಭರವಸೆಗಳನ್ನು ಪೂರೈಸಬೇಕು ಎಂದು ಅವರು ನುಡಿದರು.
ಎರಡು ದಿನಗಳ ಕಾಲದ ಸಮಾವೇಶದಲ್ಲಿ 112 ರಾಷ್ಟ್ರಗಳ ರಾಯಭಾರಿಗಳು ಭಾಗವಹಿಸಿದ್ದರು.