ಭಯೋತ್ಪಾದನಾ ಬೆದರಿಕೆಗಳ ಹಿನ್ನೆಲೆಯಲ್ಲಿ ಮೊಬೈಲ್, ಸ್ಥಿರ ದೂರವಾಣಿ ಹಾಗೂ ಅಂತರ್ಜಾಲದ ಮೂಲಕ ನಡೆಸುವ ಎಲ್ಲ ಸಂವಹನದ ಕೇಂದ್ರೀಯ ಪರಿವೀಕ್ಷಣೆಯನ್ನು ನಡೆಸುವ ಕುರಿತು ಕೇಂದ್ರ ಸರ್ಕಾರವು ಚಿಂತಿಸುತ್ತಿದೆ.
ದೂರಸಂಪರ್ಕ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯಾಗಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಟೆಲಿಮ್ಯಾಟಿಕ್ಸ್(ಸಿ-ಡಾಟ್) ದೂರಸಂಪರ್ಕ ಭದ್ರತಾ ಯೋಜನೆಯ ಕುರಿತು ಕಾರ್ಯ ಕೈಗೊಳ್ಳುತ್ತಿದ್ದು, ಇದು ಸರ್ಕಾರಕ್ಕೆ ಕೇಂದ್ರೀಯ ವ್ಯವಸ್ಥೆಯ ಮೂಲಕ ಸಂವಹನದ ಪರಿವೀಕ್ಷಣೆ ನಡೆಸಲು ಸಹಾಯ ಮಾಡಲಿದೆ.
"ಇದನ್ನೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿ ಪರಿಗಣಿಸಲಾಗುವುದು. ಮೂಲಭೂತವಾಗಿ ಇದು ಸಂದೇಶಗಳು ಹಾಗೂ ಸಂಭಾಷಣೆಗಳ ಪರಿವೀಕ್ಷಣೆಯಾಗಿದೆ. ಈ ಮೂಲಕ ನಾವು ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಬಹುದಾಗಿದೆ" ಎಂಬುದಾಗಿ ಸಿ ಡಾಟ್ ಕಾರ್ಯಕಾರಿ ನಿರ್ದೇಶಕ ಪಿ.ವಿ. ಆಚಾರ್ಯ ಹೇಳಿದ್ದಾರೆ.
ಪ್ರಸಕ್ತ ಅಸ್ತಿತ್ವದಲ್ಲಿರುವ ವಿಚಕ್ಷಣೆಯನ್ನು ಅದರ ನಿರ್ವಾಹಕರು ನಿರ್ವಹಿಸಲಿದ್ದಾರೆ. ಮತ್ತು ಪೋನ್ ಕರೆಗಳನ್ನು ಆಲಿಸಲಾಗುವುದು ಹಾಗೂ ಕಾನೂನು ಜಾರಿ ಏಜೆನ್ಸಿಗಳು ಬಯಸಿದಾಗ ಇದನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.