ನವದೆಹಲಿ: ಬಿಜೆಪಿ ಪಕ್ಷವು ಸೂತ್ರ ಹರಿದ ಗಾಳಿಪಟವಾಗಿದೆ ಎಂದು ಟೀಕಿಸಿರುವ ಪಕ್ಷದ ಹಿರಿಯ ಮುಖಂಡ ಅರುಣ್ ಶೌರಿ ಅವರು ಪಕ್ಷದ ಕೆಲವು ಉನ್ನತ ನಾಯಕರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು, ಪಕ್ಷದ ವೇದಿಕೆಯಲ್ಲಿ ಎತ್ತಲಾಗುವ ಪ್ರಶ್ನೆಗಳಿಗೂ ಅಶಿಸ್ತಿನ ಹಣೆಪಟ್ಟಿ ಹಚ್ಚಲಾಗುತ್ತಿದೆ ಎಂದು ದೂರಿದ್ದಾರೆ. ಅವರು ಎನ್‌ಡಿಟಿವಿಗೆ ಜಸ್ವಂತ್ ಸಿಂಗ್ ಉಚ್ಚಾಟನೆ ಕುರಿತುವ ನೀಡಿರುವ ಪ್ರತಿಕ್ರಿಯೆ ವೇಳೆಗೆ ತಮ್ಮ ಈ ಅಭಿಪ್ರಾಯ ಹೊರಹಾಕಿದ್ದಾರೆ.
ಆಡ್ವಾಣಿ, ರಾಜ್‌ನಾಥ್ ಸಿಂಗ್ ಹಾಗೂ ತಾನು ಸೇರಿದಂತೆ ಪಕ್ಷದ ಪ್ರತಿಯೊಬ್ಬರ ವಿರುದ್ಧವೂ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುವ ಕೆಲಸ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ ಎಂದು ಶೌರಿ ದೂರಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ತಮ್ಮ ವಿರುದ್ಧವೂ ಕ್ರಮಕೈಗೊಳ್ಳಲಿ ಎಂಬುದಾಗಿ ಅವರು ಪಕ್ಷದ ಕೆಲವು ನಾಯಕರಿಗೆ ಸವಾಲು ಹಾಕಿದ್ದಾರೆ.
ಪಕ್ಷವು ತನ್ನ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಹೇಳಿರುವ ಅವರು, ಒಂದೊಮ್ಮೆ ಪಕ್ಷ ಹಾಗೆ ಮಾಡಿದಲ್ಲಿ ಅದು ಸಂದೇಶವಾಹಕನ ಕೊಲೆಮಾಡಿದಂತೆ ಎಂದೂ ಹೇಳಿದ್ದಾರೆ.
ಪಕ್ಷವು ಸೂತ್ರಹರಿದ ಗಾಳಿ ಪಟದಂತೆ ಮತ್ತು ಪಕ್ಷದ ರಾಜ್ಯಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು 'ಪ್ರಮಾದ ಲೋಕದ ರಾಜಕುಮಾರಿ' (ಆಲಿಸ್ ಇನ್ ಬ್ಲಂಡರ್‌ಲ್ಯಾಂಡ್) ಎಂದು ಬಣ್ಣಿಸಿದ್ದಾರೆ.
"ನನ್ನ ಪ್ರಕಾರ ಬಿಜೆಪಿಯು 'ಕಟಿ ಪತಂಗ್' (ಸೂತ್ರವಿಲ್ಲದ ಗಾಳಿಪಟ). ಶೀಘ್ರವೇ ಅದರ ಮೇಲೆ ನಿಯಂತ್ರಣ ಹೊಂದಬೇಕಾಗಿದೆ. ಪಕ್ಷದೊಳಗಿರುವವರಿಗೆ ಈ ತಾಕತ್ತು ಇದೆ ಎಂಬುದು ತನಗೆ ಅನಿಸುತ್ತಿಲ್ಲ. ಯಾರಿಗಾದರೂ ಇದೆ ಎಂದಾದರೆ ಅದು ಆರ್ಎಸ್ಎಸ್ ಮಾತ್ರ" ಎಂದು ಅವರು ಹೇಳಿದ್ದಾರೆ.
"ಮುಖ್ಯಕಚೇರಿಯನ್ನು ಧ್ವಂಸಮಾಡಿ. ಮೇಲ್ಮಟ್ಟದಿಂದಲೇ ಎಲ್ಲರನ್ನೂ ಶುಚಿಗೊಳಿಸಿ. ಸ್ಫರ್ಧಾತ್ಮಕವಾಗಿರುವ, ಪ್ರಾಮಾಣಿಕವಾಗಿರುವ, ಅರ್ಪಣಾ ಮನೋಭಾವದ ಮತ್ತು ತಕ್ಷಣವೆ ಪುನರ್ಚರಿಸುವ ತಾಕತ್ತುಳ್ಳು ಹತ್ತು-ಹದಿನೈದು ರಾಜ್ಯಗಳಿಂದ ಮಂದಿಯನ್ನು ಕರೆತನ್ನಿ" ಎಂದು ಸಲಹೆ ಮಾಡಿದ್ದಾರೆ.
ಇಂದು ಪಕ್ಷದೊಳಗೆ ಪ್ರಶ್ನೆಗಳನ್ನು ಎತ್ತುವುದನ್ನೇ ಅಶಿಸ್ತು ಎಂದು ಪರಿಗಣಿಸಲಾಗುತ್ತಿದೆ ಎಂದು ದೂರಿದ್ದಾರೆ.
ಶೌರಿ ವಿರುದ್ಧ ಕ್ರಮ? ಪಕ್ಷದ ಉನ್ನತ ನಾಯಕರ ವಿರುದ್ಧ ಟೀಕಿಸಿರುವ ಇವರ ವಿರುದ್ಧ ಪಕ್ಷವು ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ, ಪಕ್ಷವನ್ನು ಆರ್ಎಸ್ಎಸ್ ಸುಪರ್ದಿಗೆ ನೀಡಬೇಕು ಎಂದು ಆಗ್ರಹಿಸಿರುವುದರಿಂದ ಇವರ ವಿರುದ್ಧ ಕ್ರಮಕೈಗೊಂಡು ಆರೆಸ್ಸೆಸ್ ವಿರುದ್ಧ ಸೆಡ್ಡು ಹೊಡೆಯುವ ಧೈರ್ಯವನ್ನು ಬಿಜೆಪಿ ತೋರಬಹುದೇ ಎಂಬ ಸಂಶಯವೂ ಇದೆ.