ನಸುಕಿಗೂ ಮುಂಚಿನ ಅವಧಿಯಲ್ಲಿ ಒರಿಸ್ಸಾದ ಸುಂದರ್‌ಗರ್ ಜಿಲ್ಲೆಯ ರೈಲ್ವೇ ನಿಲ್ದಾಣದ ಮೇಲೆ ದಾಳಿ ಮಾಡಿರುವ ಭಾರೀ ಶಸ್ತಾಸ್ತ್ರ ಸಜ್ಜಿತ ನಕ್ಸಲರು ರೈಲ್ವೇ ನಿಲ್ದಾಣವನ್ನು ಸ್ಫೋಟಿಸಿ, ಮೂವರು ರೈಲ್ವೇ ಸಿಬ್ಬಂದಿಗಳನ್ನು ಅಪಹರಿಸಿದ್ದಾರೆ. ಈ ಘಟನೆಯು ಇಲ್ಲಿಂದ 80 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ.
ರೋಕ್ಸಿ ರೈಲ್ವೇ ನಿಲ್ದಾಣಕ್ಕೆ ಧಾಂಗುಡಿ ಇಟ್ಟಿರುವ ಸುಮಾರು 20ಕ್ಕೂ ಅಧಿಕ ಮಾವೋವಾದಿ ಉಗ್ರರು, ರೈಲ್ವೇನಿಲ್ದಾಣದ ಮೇಲೆ ದಾಳಿ ನಡೆಸಿದ್ದಾರೆ. ನಿಲ್ದಾಣದಲ್ಲಿದ್ದ ಸಿಬ್ಬಂದಿಗಳಿಗೆ ರೈಲ್ವೇ ನಿಲ್ದಾಣಬಿಟ್ಟು ತೆರಳುವಂತೆ ಹೇಳಿದ್ದು ಬಳಿಕ ಸ್ಫೋಟ ಮಾಡಿದ್ದಾರೆ. ಇದು ಕೆ. ಬೊಲಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಮ ಪ್ರದೇಶದಲ್ಲಿ ಸಂಭವಿಸಿದೆ.
ಬಂಡುಕೋರರು ಸ್ಟೇಶನ್ ಮಾಸ್ಟರ್ ಸೇರಿದಂತೆ ಮೂವರು ಸಿಬ್ಬಂದಿಗಳನ್ನು ಅಪಹರಿಸಿದ್ದಾರೆ. ಈ ಚಿಕ್ಕ ರೈಲ್ವೇ ನಿಲ್ದಾಣದ ಹೊರಗಡೆ ನಿಲ್ಲಿಸಿದ್ದ ಸುಮಾರು 15 ಭಾರೀ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ರೈಲು ನಿಲ್ದಾಣವನ್ನು ರೂರ್ಕೆಲ ಉಕ್ಕು ಸ್ಥಾವರಕ್ಕೆ ಕಬ್ಬಿಣ ಅದಿರನ್ನು ಸಾಗಿಸಲು ಬಳಸಲಾಗುತ್ತಿತ್ತು.
ರೈಲ್ವೇ ನಿಲ್ದಾಣದಲ್ಲಿ ನಕ್ಸಲರು ನಡೆಸಿರುವ ದುಷ್ಕೃತ್ಯದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನತೆಯಲ್ಲಿ ಭಯಭೀತಿ ಮನೆಮಾಡಿದೆ.
ಕೆ. ಬೋಲಾಂಗ್ ಪ್ರದೇಶದಲ್ಲಿ ಸಿಆರ್‌ಪಿಎಫ್ ಶಿಬಿರವಿದ್ದರೂ ಘಟನಾ ಸ್ಥಳಕ್ಕೆ ಸಿಬ್ಬಂದಿಗಳು ಸುದೀರ್ಘಕಾಲದ ಬಳಿಕ ತಲುಪಿದರು ಎಂದು ಸ್ಥಳೀಯರು ದೂರಿದ್ದಾರೆ.
ಒರಿಸ್ಸಾ ಸೇರಿದಂತೆ ಐದು ರಾಜ್ಯಗಳಲ್ಲಿ ನಕ್ಸಲರು ಸೋಮವಾರ 48 ಗಂಟೆ ಬಂದ್‌ಗೆ ಕರೆನೀಡಿದ್ದಾರೆ. ಬಂಧಿತ ನಕ್ಸಲರ ಬಿಡುಗಡೆಗೆ ಒತ್ತಾಯಿಸಿ ನಡೆಸುತ್ತಿರುವ ಬಂದ್‌ನಲ್ಲಿ ಒರಿಸ್ಸಾವೂ ಸೇರಿದೆ.