ಮಾನವೀಯತೆ ನಿಧಾನವಾಗಿ ಮರೆಯಾಗುತ್ತಿದೆಯೇ ಎಂಬ ಆತಂಕಕ್ಕೆ ಹೊಸದೊಂದು ಸೇರ್ಪಡೆ ಇಲ್ಲಿದೆ. 16ರ ಹದಿಹರೆಯದ ಯುವತಿಯ ಮೇಲೆ ಆಕೆಯ ಅಪ್ಪ ಮತ್ತು ಚಿಕ್ಕಪ್ಪ ಕೆಲವು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ದಾರುಣ ಕೃತ್ಯವೊಂದು ಬೆಳಕಿಗೆ ಬಂದಿದೆ.
ಮಾನಿನಿ (ಹೆಸರು ಬದಲಾಯಿಸಲಾಗಿದೆ) ಪುಟ್ಟ ಮಗುವಿರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಉತ್ತರ ಪ್ರದೇಶದ ಮನೆಯಲ್ಲಿರುವಾಗ ತನಗೆ ಪದೇ ಪದೇ ಕೀಟಲೆ ಕೊಡುತ್ತಿದ್ದ ಚಿಕ್ಕಪ್ಪನಿಂದ ತನ್ನನ್ನು ರಕ್ಷಿಸುವಂತೆ ಮಾನಿನಿಯು ಅಪ್ಪನತ್ತ ಮುಖ ಮಾಡಿದ್ದಳು. ಆದರೆ ಆಕೆಯ ಅಪ್ಪ ಮಹಾಶಯ, 2008ರಲ್ಲಿ ತನ್ನ ತಮ್ಮನಿಂದ ಅವಳನ್ನು 'ರಕ್ಷಿಸಿದ'ನಾದರೂ, ಅವನೇ ಮಗಳ ಮೇಲೆ ವಕ್ರದೃಷ್ಟಿ ಬೀರಿದ.
ಈಗ ಗರ್ಭಿಣಿಯಾಗಿರುವ ಹುಡುಗಿ ಮಾನಸಿಕವಾಗಿ ಜರ್ಝರಿತಳಾಗಿದ್ದು, ಆಕೆಯನ್ನು ಈಗ ಸರಕಾರಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ. ತಂದೆ, 35ರ ಹರೆಯದ ಗುರುಚರಣ್ ಯಾದವ್ ಎಂಬಾತನನ್ನು ಯಶೋಧರ ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೀಡಾಗುವ ಮೊದಲು, ವಿಷಯ ತಿಳಿದಿದ್ದ ಸ್ಥಳೀಯರು ಕೆರಳಿ ಕೆಂಡವಾಗಿ, ಆತನನ್ನು ಹಿಗ್ಗಾಮುಗ್ಗ ಥಳಿಸಿ ಸಾಯಿಸುವುದರಲ್ಲಿದ್ದರು. ಆದರೆ, ಪೊಲೀಸರು ಬಂದು ಬಿಡಿಸಿದರು.
ಇತ್ತೀಚೆಗೆ ಹಿಂಗ್ನಾ ಎಂಬಲ್ಲಿಯೂ ಇಂಥದ್ದೇ ಒಂದು ಪ್ರಕರಣ ದಾಖಲಾಗಿದ್ದು, ಹುಡುಗಿಯೊಬ್ಬಳನ್ನು ಆಕೆಯ ಅಪ್ಪ ಮತ್ತು ಚಿಕ್ಕಪ್ಪ ಸೇರಿಕೊಂಡು ಅತ್ಯಾಚಾರ ಮಾಡಿದ್ದ ಪ್ರಕರಣ ದಾಖಲಾಗಿತ್ತು.
ಉತ್ತರ ಪ್ರದೇಶದಲ್ಲಿ 8ನೇ ತರಗತಿ ವರೆಗೆ ಓದಿದ್ದ ಮಾನಿನಿಯ ತಾಯಿ ಮೃತಪಟ್ಟ ಬಳಿಕ ತಂದೆ ಮತ್ತೊಬ್ಬಾಕೆಯನ್ನು ವಿವಾಹವಾಗಿದ್ದ. ಹೀಗಾಗಿ ಮಲತಾಯಿಯ ದೌರ್ಜನ್ಯವೂ ಇತ್ತು. ಯಾದವ್ ಮಗಳನ್ನು ಬಿಟ್ಟು ಕೆಲವು ವರ್ಷಗಳ ಹಿಂದೆ ನಾಗ್ಪುರದ ವನದೇವಿ ಎಂಬಲ್ಲಿಗೆ ಬಂದು ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ. ಎರಡನೇ ಪತ್ನಿಯಲ್ಲಿ ಆತನಿಗೆ ಒಬ್ಬ ಮಗ ಮತ್ತು ಮಗಳು ಹುಟ್ಟಿದರು. ಬಳಿಕ, ಯಾದವ್‌ನಿಂದ ರೋಸಿ ಹೋದ ಎರಡನೇ ಪತ್ನಿಯೂ ಓಡಿ ಹೋದಳೆಂದು ಸ್ಥಳೀಯರು ಹೇಳುತ್ತಾರೆ.
ಅದೇ ಸಂದರ್ಭ ಆತ ತನ್ನ ಮೊದಲ ಪತ್ನಿಯ ಮಗಳನ್ನು (ಮಾನಿನಿ) ಇಲ್ಲಿಗೆ ಕರೆದು ತಂದಿದ್ದ. ಸ್ಥಳೀಯರಿಗೆ ಸಹಜವಾಗಿ ಕುತೂಹಲ, ಈ ಯುವತಿ ಯಾರು ಎಂದು. ನೆರೆಮನೆಯ ಫರ್ಜಾನಾ ಬಾನು ಎಂಬಾಕೆಯ ಬಳಿ ಮಾನಿನಿಯು ತನ್ನ ಸಂಕಷ್ಟದ ಬಗ್ಗೆ ಬಾಯಿ ಬಿಟ್ಟಿದ್ದಳು. ಸ್ಥಳೀಯರು ಸೇರಿಕೊಂಡು ಈ ಯುವತಿಯನ್ನು ರಕ್ಷಿಸುವ ನಿರ್ಧಾರ ಕೈಗೊಂಡು, ಪೊಲೀಸರಿಗೆ ತಿಳಿಸಿಬಿಟ್ಟರು. ಇದೀಗ ಯಾದವ್ ಕಂಬಿ ಎಣಿಸುತ್ತಿದ್ದಾನೆ. ತನಿಖೆ ಮುಂದುವರಿದಿದೆ.