ಪುತ್ರ ಸರಬ್ಜೋತ್ ಸಿಂಗ್ ಒಳಗೊಂಡಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎದುರು ಹಾಜರಾಗಲು ನಿರಾಕರಿಸಿರುವ ಬೂಟಾ ಸಿಂಗ್, ತನ್ನದು ಪೌರ ನ್ಯಾಯಾಲಯದ ಅಧಿಕಾರ ಹೊಂದಿರುವ ಸಾಂವಿಧಾನಿಕ ಹುದ್ದೆಯಾಗಿದ್ದು, ತನಗೆ ಸಮನ್ಸ್ ನೀಡುವ ಅಧಿಕಾರ ಸಿಬಿಐಗೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಅವರಿಗೆ ಬರೆದಿರುವ ಎರಡು ಪುಟಗಳ ಪತ್ರದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್‌ಸಿಎಸ್‌ಸಿ) ಅಧ್ಯಕ್ಷ ಬೂಟಾ ಸಿಂಗ್, 'ಸೂಕ್ತ ಕಾನೂನುಬದ್ಧ ಶಿಷ್ಟಾಚಾರಗಳನ್ನು ಅನುಸರಿಸದೆ' ತನಗೆ ಸಮನ್ಸ್ ನೀಡಿರುವ ಸಿಬಿಐ ಕ್ರಮವನ್ನು ಪ್ರಶ್ನಿಸಿದ್ದಾರೆ.
ತಾನು ಅಧ್ಯಕ್ಷನಾಗಿರುವ ಆಯೋಗದ ಸಂವಿಧಾನವೇ, ಅದೊಂದು ಪೌರ ನ್ಯಾಯಾಲಯ ಎಂದೇ ಹೇಳುತ್ತದೆ. ತತ್ಪರಿಣಾಮವಾಗಿ, ಈ ಆಯೋಗದ ಅಧ್ಯಕ್ಷರಿಗೂ ಸಿವಿಲ್ ನ್ಯಾಯಾಲಯದ ಅಧಿಕಾರಗಳಿರುತ್ತವೆ. ಮಾತ್ರವಲ್ಲದೆ, ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬಿಐ ಕೂಡ ಆಯೋಗದ ಅಧ್ಯಕ್ಷರಿಗೆ ಕೋರ್ಟಿಗೆ ಹಾಜರಾಗುವಂತೆ ನೇರವಾಗಿ ಪತ್ರ ಬರೆಯುವಂತಿಲ್ಲ ಎಂಬ ವಿಧಿಯೂ ಕಾನೂನಿನಲ್ಲಿದೆ ಎಂದು ಬೂಟಾ ಸಿಂಗ್ ಹೇಳಿದ್ದಾರೆ.
ಸೋಮವಾರದ ಮೊದಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಬಿಐಯು ಬೂಟಾ ಸಿಂಗ್‌ಗೆ ನೋಟಿಸ್ ಕಳುಹಿಸಿತ್ತು. ಆದರೆ ಬೂಟಾ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆಯೋಗದ ಎದುರಿದ್ದ ಕೇಸ್ ಒಂದನ್ನು ಇತ್ಯರ್ಥಗೊಳಿಸುವುದಕ್ಕಾಗಿ ನಾಸಿಕ್ ಮೂಲದ ಗುತ್ತಿಗೆದಾರರೊಬ್ಬರಿಂದ ಬೂಟಾ ಸಿಂಗ್ ಪುತ್ರ ಒಂದು ಕೋಟಿ ರೂ. ಲಂಚ ಪಡೆದಿದ್ದರು ಎಂದು ಆರೋಪಿಸಿ ಜುಲೈ 31ರಂದು ಸರಬ್ಜೋತ್ ಸಿಂಗ್‌ನನ್ನು ಸಿಬಿಐ ಬಂಧಿಸಿತ್ತು.
ಇಷ್ಟು ಮಾತ್ರವಲ್ಲದೆ, ತನಗೆ ಸಮನ್ಸ್ ನೀಡಿದ ಸಂಗತಿಯನ್ನು ಮಾಧ್ಯಮಗಳಿಗೆ ಬಯಲುಗೊಳಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಬೂಟಾ ಸಿಂಗ್ ಆಗ್ರಹಿಸಿದ್ದಾರೆ.
ಬಿಹಾರ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದ ಬೂಟಾ ಸಿಂಗ್ ಅವರು, ಪಿ.ವಿ.ನರಸಿಂಹ ರಾವ್ ಕಾಲದಲ್ಲಿ ಕಾಂಗ್ರೆಸ್ ಮಂತ್ರಿಯಾಗಿದ್ದಾಗ, ಜಾರ್ಖಂಡ್ ಮುಕ್ತಿ ಮೋರ್ಚಾ ಲಂಚ ಹಗರಣದಲ್ಲಿಯೂ ಆರೋಪಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕಾಂಗ್ರೆಸ್ ತ್ಯಜಿಸಿ ವಾಜಪೇಯಿ ಮಂತ್ರಿಮಂಡಲದಲ್ಲಿಯೂ ಸಚಿವರಾಗಿದ್ದ ಬೂಟಾ ಸಿಂಗ್, ಬಳಿಕ ಚಾರ್ಜ್‌ಶೀಟ್ ಸಲ್ಲಿಸಲಾಗಿರುವ ಸಚಿವರ ರಾಜೀನಾಮೆಗೆ ಜಯಲಲಿತಾ ಆಗ್ರಹಿಸಿದ ಸಂದರ್ಭದಲ್ಲಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಬಳಿಕ ತಮ್ಮದೇ ಪಕ್ಷ ಹುಟ್ಟು ಹಾಕಿದರಾದರೂ, ಅದು ಇನ್ನಿಲ್ಲದಂತೆ ನೆಲಕಚ್ಚಿತು. ಕೊನೆಗೆ ಕಾಂಗ್ರೆಸ್ ಪಕ್ಷವು ಅವರನ್ನು ಮರಳಿ ಕರೆಸಿಕೊಂಡು, ಬಿಹಾರ ರಾಜ್ಯಪಾಲರ ಹುದ್ದೆ ನೀಡಿತ್ತು. ಅಲ್ಲಿಯೂ ರಾಷ್ಟ್ರಪತಿ ಆಳ್ವಿಕೆ ಹೇರಿದ ಸಂದರ್ಭ ಅಪಸ್ವರ ಕೇಳಿಬಂದ ಬಳಿಕ, ಕಾಂಗ್ರೆಸ್ ಪಕ್ಷವು ಅವರಿಗೆ ಕೇಂದ್ರದ ಸಂಪುಟ ಸಚಿವ ಸ್ಥಾನಮಾನವುಳ್ಳ ಪರಿಶಿಷ್ಟ ಜಾತಿಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು.