ಭಾರತ ವಿಭಜನೆಯಲ್ಲಿ ಮಹಮ್ಮದಾಲಿ ಜಿನ್ನಾ ಅವರ ಕೊಡುಗೆ ಏನಿತ್ತು ಎಂಬ ಕುರಿತು ವಿವಾದವು ಭಾರೀ ಧೂಳೆಬ್ಬಿಸುತ್ತಿರುವ ಸಂದರ್ಭದಲ್ಲಿ, ಆರೆಸ್ಸೆಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಕೂಡ, ಜಿನ್ನಾ ಅವರು ಒಂದು ಹಂತದಲ್ಲಿ ಅಖಂಡ ಭಾರತಕ್ಕೆ ಬದ್ಧತೆ ಪ್ರದರ್ಶಿಸಿದ್ದರು ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಪಾಕಿಸ್ತಾನ ಸಂಸ್ಥಾಪಕ ಜಿನ್ನಾ ಅವರಿಗೆ ಹಲವು ಮುಖಗಳಿದ್ದವು. ಒಂದು ಹಂತದಲ್ಲಿ ಅವರು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರಿಗೆ ಜತೆಯಾಗಿದ್ದರು ಮತ್ತು ಅಖಂಡ ಭಾರತಕ್ಕೆ ಬದ್ಧತೆ ಪ್ರಕಟಿಸಿದ್ದರು ಎಂದು ಸುದರ್ಶನ್ ಹೇಳಿದ್ದಾರೆ.
'ಗಾಂಧೀಜಿ ಹಠ ಹಿಡಿದಿದ್ದರೆ, ಭಾರತ ವಿಭಜನೆ ಆಗುತ್ತಿರಲಿಲ್ಲ' "ಜಿನ್ನಾ ಅವರಲ್ಲಿ ಹಲವು ವ್ಯಕ್ತಿತ್ವಗಳಿದ್ದವು. ನೀವು ಇತಿಹಾಸವನ್ನು ಸರಿಯಾಗಿ ಓದಿದ್ದರೆ, ಅವರು ತಿಲಕರ ಜೊತೆ ಸೇರಿರುವುದನ್ನು ತಿಳಿಯಬಹುದು. ಮಹಾತ್ಮ ಗಾಂಧಿ ಅವರು ಭಾರತ ವಿಭಜನೆಯಾಗಬಾರದು ಎಂದು ಹಠ ಹಿಡಿದಿದ್ದರೆ, ಅದು ಆಗುತ್ತಿರಲಿಲ್ಲ" ಎಂದು ಸುದರ್ಶನ್ ಹೇಳಿದ್ದಾರೆ.
ಮುಸ್ಲಿಂ ಲೀಗ್ ಮುಖಂಡ ಜಿನ್ನಾ ಅವರು ಜಾತ್ಯತೀತರೇ ಎಂಬ ಕುರಿತಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
ಜಿನ್ನಾರನ್ನು ಹೊಗಳಿದರು ಎಂಬ ಆರೋಪದಲ್ಲಿ ಹಿರಿಯ ಮುಖಂಡ ಜಸ್ವಂತ್ ಸಿಂಗ್‌ರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕುರಿತು ಪ್ರತಿಕ್ರಿಯೆ ಕೇಳಿದಾಗ ಮಾಜಿ ಆರೆಸ್ಸೆಸ್ ಮುಖ್ಯಸ್ಥ ಸುದರ್ಶನ್, ಇದು ಬಿಜೆಪಿಯ ಆಂತರಿಕ ವಿಷಯ ಎಂದಷ್ಟೇ ಹೇಳಿದರು.
ಎಲ್.ಕೆ.ಆಡ್ವಾಣಿಯವರು ಹಿಂದೆ ಜಿನ್ನಾರನ್ನು ಜಾತ್ಯತೀತ ಎಂದು ಕರೆದಿದ್ದಾಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಠಿಣ ನಿಲುವು ತಾಳಿತ್ತಲ್ಲ ಎಂದು ಕೇಳಿದಾಗ, ಆಗ ಆಡ್ವಾಣಿ ಅವರು ಸ್ಪಷ್ಟೀಕರಣ ನೀಡಿದ್ದರು, ಇದರಿಂದ ಸಂಘವು ಸಂತೃಪ್ತವಾಗಿತ್ತು ಎಂದು ಹೇಳಿದರು.