ಪಾಕಿಸ್ತಾನದ ಪಾಸ್ಪೋರ್ಟ್ ಹಾಗೂ ಜಮ್ಮು ಕಾಶ್ಮೀರದ ಗುರುತಿನ ಚೀಟಿಹೊಂದಿದ್ದ ಲಷ್ಕರ್-ಈ-ತೋಯ್ಬಾದ ಶಂಕಿತ ಉಗ್ರನೊಬ್ಬನನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದ್ದು ಆತನಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವದೆಹಲಿ ರೈಲ್ವೇ ನಿಲ್ದಾಣದ ಅಜ್ಮೀರಿ ಗೇಟ್ ಬದಿಯಿಂದ ರೈಲಿಳಿದು ಬರುತ್ತಿದ್ದ ವೇಳೆ ಈತನನ್ನು ದೆಹಲಿ ಪೊಲೀಸ್‌ನ ವಿಶೇಷ ಘಟಕವು ಮಧ್ಯಾಹ್ನ ಸುಮಾರು 12.40ರ ವೇಳೆಗೆ ಬಂಧಿಸಿದೆ ಎಂದು ಡಿಸಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಅದಾಗ್ಯೂ ಆತನ ಇಬ್ಬರು ಸಹಚರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಈತ ಜಮ್ಮು ಕಾಶ್ಮೀರದ ಗುರುತಿನ ಚೀಟಿ ಹೊಂದಿದ್ದು, ಇದರಲ್ಲಿ ಈತನ ಹೆಸಲು ಸಲೀಂ ಎಂದು ನಮೂದಾಗಿದೆ. ಈತನ ಬಳಿಯಿಂದ ಪಾಕಿಸ್ತಾದ ಪಾಸ್ಪೋರ್ಟನ್ನೂ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಯೂಸುಫ್ ಎಂಬುದಾಗಿ ಹೆಸರಿದೆ ಎಂಬುದಾಗಿ ಕುಮಾರ್ ತಿಳಿಸಿದ್ದಾರೆ.
ಈತನ ಬಳಿಯಿಂದ ಎರಡು ಟೈಮರ್‌ಗಳು, ಸ್ಫೋಟಕಗಳು, ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಎರಡು ಕೆಜಿಗಳಷ್ಟು ಆರ್‌ಡಿಎಕ್ಸ್ ಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಈತನ ಬಳಿಯಿಂದ ಇತರ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದ್ದು ಇದನ್ನು ಪೊಲೀಸರು ಪರೀಕ್ಷಿಸುತ್ತಿದ್ದಾರೆ.
ಶಂಕಿತ ಉಗ್ರರು ಮಹಾರಾಷ್ಟ್ರಕ್ಕೆ ಪ್ರಯಾಣಿಸುತ್ತಿದ್ದರು ಎಂಬುದಾಗಿ ಊಹಿಸಲಾಗಿದೆ. ಪರಾರಿಯಾಗಿರುವ ಇನ್ನಿಬ್ಬರ ಪತ್ತೆಗಾಗಿ ಪ್ರಯತ್ನಗಳು ಮುಂದುವರಿದಿದೆ.
ಈ ತಿಂಗಳಲ್ಲಿ ದೆಹಲಿಯಲ್ಲಿ ಬಂಧನಕ್ಕೀಡಾಗುತ್ತಿರುವ ಎರಡನೆಯ ಉಗ್ರ ಈತನಾಗಿದ್ದಾನೆ. ಆಗಸ್ಟ್ 6ರಂದು, ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನ ಮುಂಚಿತವಾಗಿ ವಿಶೇಷ ಘಟಕವು ಇಬ್ಬರು ಶಂಕಿತ ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಕೇಂದ್ರೀಯ ಮುಂಬೈನ ದರಿಯಾಗಂಜ್‌ನಲ್ಲಿ ಬಂಧಿಸಿತ್ತು.