ಸ್ವಿಸ್ ಬ್ಯಾಂಕ್‌ನಲ್ಲಿ ಕೊಳೆಯುತ್ತಿರುವ ಭಾರತದ ಕಪ್ಪಹಣವನ್ನು ಭಾರತಕ್ಕೆ ಮರಳಿ ತರಲು ಭಾರತವು ನಿರ್ದಿಷ್ಟ ಪ್ರರಣಗಳೊಂದಿಗೆ ಸ್ವಿಸ್ ಬ್ಯಾಂಕನ್ನು ಸಂಪರ್ಕಿಸಲು ಪ್ರಕ್ರಿಯೆಯನ್ನು ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ಭಾರತ ಹಾಗೂ ಸ್ವಿಸ್ ಬ್ಯಾಂಕು ಅಧಿಕಾರಿಗಳ ನಡುವೆ ಡಿಸೆಂಬರ್‌ನಲ್ಲಿ ಸಭೆಯೊಂದನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
"ನಾವು ಸ್ವಿಸ್ ಪ್ರಾಧಿಕಾರ ಮನ ಒಲಿಸುತ್ತಿದ್ದು, ನಮ್ಮ ಪ್ರಯತ್ನದ ಬಳಿಕ ಅವರು ಈ ಕುರಿತು ಚರ್ಚೆಗೆ ಒಪ್ಪಿದ್ದು, ಮಾಹಿತಿ ವಿನಿಮಯಕ್ಕಾಗಿ ದುಪ್ಪಟ್ಟು ತೆರಿಗೆ ಒಪ್ಪಂದವನ್ನು ಬದಿಗಿರಿಸುವ ನಿಟ್ಟಿನಲ್ಲಿ ತಿದ್ದುಪಡಿ ಕುರಿತಂತೆ ಮಾತುಕತೆ ಆರಂಭಿಸಲು ಒಪ್ಪಿದ್ದಾರೆ ಎಂದು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಅದಾಗ್ಯೂ, ಭಾರತ ಮತ್ತು ಸ್ವಿಜರ್‌ಲ್ಯಾಂಡ್ ನಡುವೆ ದುಪ್ಪಟ್ಟು ತೆರಿಗೆ ಒಪ್ಪಂದ ನಡೆದರೂ, ಹೊಸಒಪ್ಪಂದದಡಿ ಖಾತೆದಾರರ ಹುಡುಕಾಟಕ್ಕೆ ಅವಕಾಶ ಲಭಿಸದು ಎಂಬುದನ್ನು ಸ್ಪಷ್ಟಪಡಿಸಿದೆ.