ಸೆಂಟ್ರಲ್ ಮುಂಬೈಯ ಐದು ಮಹಡಿಯ ಕಟ್ಟಡವೊಂದು ಮಂಗಳವಾರ ಸಂಜೆ ಕುಸಿದು ಬಿದ್ದಿದ್ದು, 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಮೂಲಗಳ ಪ್ರಕಾರ ಇದುವರೆಗೆ ಮೂರು ಜನರನ್ನು ರಕ್ಷಿಸಲಾಗಿದೆ. ಸಾವು-ನೋವುಗಳ ಬಗ್ಗೆ ಯಾವುದೇ ನಿಖರವಾದ ಮಾಹಿತಿಗಳು ಸಿಕ್ಕಿಲ್ಲ
ಸೆಂಟ್ರಲ್ ಮುಂಬೈಯಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ಖತಾವ್ ಮ್ಯಾನ್ಸನ್ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. 10ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿದ್ದು, ಅಂಬುಲೆನ್ಸ್‌ಗಳು ತುರ್ತು ಚಿಕಿತ್ಸೆಗಾಗಿ ಸಿದ್ಧವಾಗಿವೆ. ಭಾರೀ ಜನರು ಕುತೂಹಲದಿಂದ ಸ್ಥಳಕ್ಕೆ ಧಾವಿಸಲು ಯತ್ನಿಸುತ್ತಿದ್ದು, ಪೊಲೀಸರು ಅವರನ್ನು ಹಿಮ್ಮೆಟ್ಟಿಸುತ್ತಿದ್ದಾರೆ.
ಸಂಜೆ ಸುಮಾರು 7 ಗಂಟೆ ಹೊತ್ತಿಗೆ ನಾನು ದೊಡ್ಡ ಶಬ್ದವೊಂದನ್ನು ಕೇಳಿದೆ. ಅದು ಸ್ಫೋಟದ ಸದ್ದಿನಂತಿತ್ತು. ಅದೇ ಹೊತ್ತಿಗೆ ಕಟ್ಟಡ ಕುಸಿಯುತ್ತಿರುವುದು ಕೂಡ ನನ್ನೆದುರೇ ನಡೆದು ಹೋಯಿತು. ಕೆಲವೇ ನಿಮಿಷಗಳಲ್ಲಿ ಅಲ್ಲಿನ ಗಾಳಿ ಸಂಪೂರ್ಣವಾಗಿ ಧೂಳುಮಯವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ.