ಬಿಜೆಪಿ ಪಕ್ಷವು ಸೂತ್ರಹರಿದ ಗಾಳಿಪಟದಂತಾಗಿದೆ ಮತ್ತು ಪಕ್ಷದೊಳಗೆ ಆಮೂಲಾಗ್ರ ಶುದ್ಧೀಕರಣವಗಾಬೇಕು ಎಂಬುದಾಗಿ ಪಕ್ಷದ ಹಿರಿಯ ನಾಯಕರ ವಿರುದ್ಧ ಹರಿಹಾಯ್ದಿದ್ದ ಅರುಣ್ ಶೌರಿ ವಿರುದ್ಧ ಎಚ್ಚರಿಕೆಯ ನಡೆ ಇಡುತ್ತಿರುವ ಬಿಜೆಪಿ ಮಂಗಳವಾರ ಅವರಿಂದ ಸ್ಪಷ್ಟೀಕರಣ ಕೇಳಿದೆ. ಜಿನ್ನಾರನ್ನು ಶ್ಲಾಘಿಸಿ ಪಕ್ಷದಿಂದ ಉಚ್ಚಾಟಿಸಿಕೊಂಡಿರುವ ಜಸ್ವಂತ್ ಸಿಂಗ್ ಗತಿಯೇ ಶೌರಿಗೂ ಬರಲಿದೆ ಎಂಬ ಊಹೆ ಸದ್ಯಕ್ಕೆ ಸುಳ್ಳಾಗಿದೆ.
ಶೌರಿ ಅವರ ಖಾರವಾದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಬಿಜೆಪಿಯ ಉನ್ನತ ನಾಯಕರು ದೆಹಲಿಯಲ್ಲಿ ಮಂಗಳವಾರ ಸಭೆ ಸೇರಿದ್ದು ಚರ್ಚೆ ನಡೆಸಿದ್ದಾರೆ. ಇದು ಶೋಕಾಸ್ ನೋಟೀಸ್ ಅಲ್ಲ, ವಿವರಣೆ ಕೇಳುವ ಪತ್ರವೂ ಅಲ್ಲ. ಅವರಿಂದ ಸ್ಪಷ್ಟೀಕರಣ ಮಾತ್ರ ಕೇಳಲಾಗಿದೆ ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.
ರಾಜನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೌರಿಯವರನ್ನೂ ಉಚ್ಚಾಟಿಸಬೇಕು ಎಂದು ಒಂದು ವರ್ಗ ಹೇಳಿದರೆ, ಎಲ್ಲರನ್ನೂ ಉಚ್ಚಾಟಿಸುತ್ತಾ ಹೋಗಲು ಸಾಧ್ಯವಿಲ್ಲ. ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಇನ್ನೊಂದು ವರ್ಗ ಒತ್ತಾಯಿಸಿತು ಎಂದು ಹೇಳಲಾಗಿದೆ.
ಪಕ್ಷದ ವೇದಿಕೆಯಲ್ಲಿ ಎತ್ತುವ ಪ್ರಶ್ನೆಗಳೂ ಅಶಿಸ್ತೇ ಎಂದು ಪ್ರಶ್ನಿಸಿರುವ ಶೌರಿ, ಪಕ್ಷವನ್ನು ಆರ್ಎಸ್ಎಸ್ ನಿಯಂತ್ರಣಕ್ಕೊಪ್ಪಿಸಬೇಕು ಎಂದು ಹೇಳಿದ್ದರು.
ಸ್ಪಷ್ಟನೆ ನೀಡಲು ಸಿದ್ಧ ಈ ಮಧ್ಯೆ, ಪಕ್ಷವು ಸ್ಪಷ್ಟನೆ ಕೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಶೌರಿ ತಾನು ಸ್ಪಷ್ಟನೆ ನೀಡಲು ಸಿದ್ಧ ಎಂದು ಹೇಳದ್ದಾರೆ. "ನನ್ನ ಹೇಳಿಕೆಯಲ್ಲಿ ಏನಾದರೂ ಅಸ್ಪಷ್ಟತೆ ಇದ್ದಲ್ಲಿ ಆ ಬಗ್ಗೆ ಸ್ಪಷ್ಟೀಕರಣ ನೀಡಲು ನಾನು ಸಿದ್ಧವಾಗಿದ್ದೇನೆ" ಎಂಬುದಾಗಿ ಅವರು ಹೇಳಿದ್ದಾರೆ.