ಲಷ್ಕರೆ-ಇ-ತೋಯ್ಬಾ ಸ್ಥಾಪಕ ಹಾಗೂ ಮುಖ್ಯಸ್ಥನಾಗಿರುವ ಹಫೀಜ್ ಮೊಹಮ್ಮದ್ ಸಯೀದ್ ಮತ್ತು ಮುಂಬೈಯಲ್ಲಿ ಉಗ್ರವಾದಿ ದಾಳಿಯ ರೂವಾರಿ ಜಾಕೀರ್-ಉರ್-ರೆಹಮಾನ್ ಲಕ್ವಿ ಅರುಗಳಿಗೆ ಇಂಟರ್‌ಪೋಲ್ ಮಂಗಳವಾರ ರಾತ್ರಿ ರೆಡ್ ಕಾರ್ನರ್ ನೋಟೀಸ್ ನೀಡಿದೆ.
59ರ ಹರೆಯದ ಸಯೀದ್ ಹಾಗೂ 48ರ ಹರೆಯದ ಲಕ್ವಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ನೀಡಲಾಗಿದೆ. ಮುಂಬೈ ಮೇಲೆ ಕಳೆದ ನವೆಂಬರ್ 26ರಂದು ನಡೆಸಿರುವ ಉಗ್ರಗಾಮಿ ದಾಳಿ ಕೃತ್ಯದಲ್ಲಿ ಈ ಇಬ್ಬರ ಪಾತ್ರದ ಹಿನ್ನೆಲೆಯಲ್ಲಿ ಮುಂಬೈ ನ್ಯಾಯಾಲಯ ಜಾಮೀನು ರಹಿತ ವಾರಂಟ್ ನೀಡಿದ ಬಳಿಕ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್ ನೀಡಿದೆ.
ಲಷ್ಕರ್ ಕಮಾಂಡರ್ ಜರಾರ್ ಶಾ ಮತ್ತು ಅಬು ಅಲ್ ಕಾಮಾ ವಿರುದ್ಧವೂ ಇಂತದೇ ವಾರಂಟ್ ಹೊರಡಿಸಲು ಭಾರತ ವಿನಂತಿಸಿ ಪುರಾವೆ ನೀಡಿದ್ದು, ಇವರ ವಿರುದ್ಧದ ಪುರಾವೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಇಂಟರ್‌ಪೋಲ್ ಹೇಳಿದೆ.
ವಿಚಾರಣಾ ನ್ಯಾಯಾಲಯವು ಸಯೀದ್ ಮತ್ತು ಲಕ್ವಿ ವಿರುದ್ಧ ಹೊರಡಿಸಿರುವ ಜಾಮೀನು ರಹಿತ ವಾರಂಟ್‌ಗಳೊಂದಿಗೆ ಸಿಬಿಐಯು ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟೀಸ್‌ಗಳನ್ನು ನೀಡಲಾಗಿದೆ. ಜಾಮೀನು ರಹಿತ ವಾರಂಟ್ ಆಧಾರದಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟೀಸ್ ಹೊರಡಿಸಿದೆ.