ಫೈನಾನ್ಷಿಯಲ್ ಟೈಮ್ಸ್ ಬಳಗದ ಎಫ್‌ಡಿಐ ನಿಯತಕಾಲಿಕ ನೀಡುವ "ಎಫ್‌ಡಿಐ ವರ್ಷದ ಏಷ್ಯನ್ ವ್ಯಕ್ತಿ" ಪ್ರಶಸ್ತಿಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗೆದ್ದುಕೊಂಡಿದ್ದಾರೆ. ಗುಜರಾತ್ ರಾಜ್ಯವನ್ನು ಆರ್ಥಿಕತೆಯ ಸ್ವರ್ಗವನ್ನಾಗಿ ರೂಪಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಒಲಿದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಕ್ರಿಯಾಶೀಲ, ವಿದೇಶೀ ಬಂಡವಾಳ ಹರಿವಿಗೆ ನವೀನ ರೀತಿಯ ಕ್ರಮಗಳನ್ನು ಕೈಗೊಳ್ಳುವ ಮತ್ತು ತಮ್ಮ ವ್ಯಾಪ್ತಿಯಲ್ಲಿ ಉದ್ದಿಮೆಗಳ ಪರವಾಗಿ ವಾತಾವರಣ ನಿರ್ಮಿಸುವ ರಾಜಕೀಯ ಮತ್ತು ವ್ಯಾವಹಾರಿಕ ಮುಖಂಡರನ್ನು ಜಾಗತಿಕವಾಗಿ ಗುರುತಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡಲು ಆರಂಭಿಸಲಾಗಿತ್ತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಹೇಳಿಕೆಯ ಪ್ರಕಾರ, ಕಳೆದ ವರ್ಷ ಗುಜರಾತ್ ರಾಜ್ಯವು 2.8 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ (ಎಫ್‌ಡಿಐ)ಯನ್ನು ಆಕರ್ಷಿಸಿತ್ತು. ಇದು ದೇಶದ ವಿದೇಶೀ ನೇರ ಬಂಡವಾಳದ ಶೇ.10.3ರಷ್ಟು. ಮಾತ್ರವಲ್ಲದೆ, ಹಿಂದಿನ ವರ್ಷಕ್ಕಿಂತ ಇದು ಶೇ.57ರಷ್ಟು ಹೆಚ್ಚು.
ಗುಜರಾತ್ ಭಾರತದ ಯಾವುದೇ ರಾಜ್ಯಕ್ಕೆ ಹೋಲಿಸಿದರೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಇಲ್ಲಿ ಪ್ರತಿ ವರ್ಷ ಶೇ.10ರ ಆರ್ಥಿಕ ಪ್ರಗತಿ ವೃದ್ಧಿಯಾಗುತ್ತಿದೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.