ಸಕ್ಕರೆ ಕಾಯಿಲೆಯಿರುವ ವ್ಯಕ್ತಿಯೊಬ್ಬರು ಲಡ್ಡು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ಪರಿಣಾಮ ಸಾವನ್ನಪ್ಪಿದ ಘಟನೆಯೊಂದು ಆಂಧ್ರ ಪ್ರದೇಶದಿಂದ ವರದಿಯಾಗಿದೆ.
39ರ ಹರೆಯದ ಬಂಡು ಜೋಷಿ ಎಂಬವರು ಇಲ್ಲಿನ ಖಾಸಗಿ ಎಫ್ಎಂ ಚಾನೆಲ್ ಒಂದು ಗಣೇಶೋತ್ಸವ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಲಡ್ಡು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿ ಏಳು ಲಡ್ಡುಗಳನ್ನು ತಿಂದಿದ್ದರು.
ಸ್ವತಃ ಕ್ಯಾಟರಿಂಗ್ ಉದ್ಯೋಗಿಯಾಗಿರುವ, ತಾರ್ನಕಾ ಎಂಬಲ್ಲಿನವರಾಗಿರುವ ಜೋಷಿ, ಹಬ್ಬಕ್ಕೆಂದು ನ್ಯೂ ನಲ್ಲಕುಂಟ ಎಂಬಲ್ಲಿರುವ ತಮ್ಮ ಬಂಧುಗಳ ಮನೆಗೆ ಬಂದಿದ್ದರು. ಅವರು ಒಂದೇ ಬಾರಿಗೆ ಆರೇಳು ಲಡ್ಡುಗಳನ್ನು ತಿಂದು ಮುಗಿಸಿದರು. ಆದರೆ, ಮಧುಮೇಹ ಕಾಯಿಲೆ ಇರುವ ಅವರಿಗೆ ತಕ್ಷಣವೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.