ಮಹಿಳೆಯೊಬ್ಬಳು ಹಂದಿ ಜ್ವರಕ್ಕೆ ಬಲಿಯಾಗುವುದರೊಂದಿಗೆ ಪುಣೆ ನಗರದಲ್ಲಿ ಹಂದಿ ಜ್ವರಕ್ಕೆ ಬಲಿಯಾದವರ ಸಂಖ್ಯೆ 25ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಅಗಸ್ಟ್ 22 ರಂದು ನತದೃಷ್ಟೆ ಶಬಾನಾ ಶೇಖ್ಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ತುರ್ತುನಿಗಾಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಸತತ ನಾಲ್ಕು ದಿನಗಳ ನಂತರ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ , ಅಗಸ್ಟ್ 24 ರಿಂದ ಸಾಲಾ ಕಾಲೇಜುಗಳು ಆರಂಭವಾಗಿದ್ದರೂ ಹಂದಿ ಜ್ವರದ ಭಯದಿಂದಾಗಿ ಪಾಲಕರು, ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಣೇಶ ಹಬ್ಬ ಆರಂಭವಾಗಿದ್ದರಿಂದ ಜನಸಂದಣಿಯಿರುವ ಪ್ರದೇಶಗಳಿಗೆ ತೆರಳುವಾಗ, ಮಾಸ್ಕ್ ಉಪಯೋಗಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.