ರೌವುರ್ಕೆಲಾ (ಒರಿಸ್ಸಾ), ಬುಧವಾರ, 26 ಆಗಸ್ಟ್ 2009( 14:52 IST )
PTI
ಸುಂದರ್‌ಘರ್ ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸುವುದನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ ಮಾಜಿ ಮಾವೋವಾದಿ, ಖಂಡೂರಿ ಲೋಹಾರ್ ಅಲಿಯಾಸ್ ಮಾಧುರಿ ಇದೀಗ ಪೊಲೀಸ್ ಹುದ್ದೆಯನ್ನು ಅಲಂಕರಿಸಿ ಕಾನೂನು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಕಳೆದ ನಾಲ್ಕು ವರ್ಷಗಳ ಹಿಂದೆ, ಉದ್ಯೋಗ ಮತ್ತು ವಾಸಿಸಲು ಮನೆಯನ್ನು ಸರಕಾರ ನೀಡಿದಲ್ಲಿ ಶರಣಾಗುವ ಷರತ್ತಿನ ಮೇಲೆ ಮಾವೋವಾದಿ ಧಿರಿಸನ್ನು ತ್ಯಜಿಸಿದ್ದಳು. ಇದೇ ಮಾಧುರಿಗೆ ಕೆಲ ದಿನಗಳ ಹಿಂದೆ ಪೊಲೀಸ್ ಉದ್ಯೋಗ ದೊರೆತಿದೆ.
ತನ್ನ ಮಾವನ ಗ್ರಾಮದಲ್ಲಿ ಆಯೋಜಿಸಿದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಧುರಿಗೆ ಕಳೆದುಹೋದ ದಿನಗಳನ್ನು ಮತ್ತೆ ನೆನಪಿಸಲು ಇಷ್ಟವಿಲ್ಲ. ಗತಿಸಿಹೋದ ನೆನೆಪುಗಳನ್ನು ಮರುಕಳಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
ನಾನು ಮಾವೋವಾದಿಯಾಗಿದ್ದೆ ಎನ್ನುವುದನ್ನು ಮರೆತು, ಹೊಸ ಜೀವನ ಆರಂಭಿಸಲು ಸಂತಸವಾಗುತ್ತದೆ ಎಂದು ಮಾಧುರಿ ಅಭಿಪ್ರಾಯಪಟ್ಟಿದ್ದಾಳೆ.
ಬಂದಾಮುಂಡಾ ಪೊಲೀಸ್ ಠಾಣೆಯ ಅಧಿಕಾರಿ ಎ.ಕೆ.ಸ್ವೈನ್ ಮಾತನಾಡಿ , ಮಾವೋವಾದಿ ಮಹಿಳೆಯೊಬ್ಬಳು, ಪೊಲೀಸ್‌ಮಹಿಳೆಯಾಗಿ ಬದಲಾಗಿರುವುದು ಪ್ರಥಮ ಬಾರಿಯಾಗಿದೆ. ಮುಂಬರುವ ದಿನಗಳಲ್ಲಿ ಇತರ ಮಾವೋವಾದಿಗಳು ಕೂಡಾ ಮಾಧುರಿಯನ್ನು ಹಿಂಬಾಲಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.