ಬಿಜೆಪಿಯನ್ನು ಕು ಕ್ಲುಕ್ಸ್ ಕ್ಲಾನ್‌ಗೆ ಹೋಲಿಸಿದ ಜಸ್ವಂತ್ ಸಿಂಗ್
ನವದೆಹಲಿ, ಬುಧವಾರ, 26 ಆಗಸ್ಟ್ 2009( 19:56 IST )
PTI
ಬಿಜೆಪಿಯ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಅವರು ಬುಧವಾರ ಬಿಜೆಪಿಯನ್ನು ಹಿಂಸಾಚಾರದ ಮೂಲಕ ಹಕ್ಕುಗಳನ್ನು ರಕ್ಷಿಸುವ ಬಿಳಿ ಅಮೆರಿಕನ್ನರ ಸಂಘಟನೆ ಕು ಕ್ಲುಕ್ಸ್ ಕ್ಲಾನ್‌ಗೆ ಹೋಲಿಸಿದ್ದಾರೆ. ಅಲ್ಲದೆ, ಅಡ್ವಾಣಿಯವರು ಕಳೆಗಳಕೂಟದಿಂದ ಸುತ್ತುವರಿದಿದ್ದಾರೆ ಎಂದು ಟೀಕಿಸಿದ್ದಾರೆ.
ತನ್ನನ್ನು ಯಾಕೆ ಅಷ್ಟೊಂದು ಒರಟಾಗಿ ಉಚ್ಚಾಟಿಸಲಾಯಿತು ಎಂದು ಮಾಜಿ ವಿದೇಶಾಂಗ ಸಚಿವರು ಪ್ರಶ್ನಿಸಿದರು. ಅವರು ಸಂದರ್ಶನ ಒಂದರಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಪ್ರಶ್ನೆಯನ್ನು ಎಸೆದಿದ್ದಾರೆ.
"ದಯವಿಟ್ಟು ನನ್ನನ್ನು ಕೇಳಬೇಡಿ. ನಾನು ಸಲಹೆಗಾರರು ಮತ್ತು ಚಿಂತಕರ ವಲಯದಿಂದ ಹೊರಗಿದ್ದೇನೆ. ಯಾಕೆಂದರೆ ನಾನು ಆರ್ಎಸ್ಎನ್‌ನವನಲ್ಲ ನೋಡಿ. ಹಾಗಾಗಿ... ನಾವೊಂದು ರಾಜಕೀಯ ಪಕ್ಷವೇ... ಬಿಜೆಪಿಯು ಕು ಕ್ಲುಕ್ಸ್ ಕ್ಲಾನ್‌ನ ಭಾರತೀಯ ಆವೃತ್ತಿಯಾಗುತ್ತಿದೆಯೇ" ಎನ್ನುತ್ತಾ ಪ್ರಶ್ನೆಯೊಂದಕ್ಕೆ ಮರು ಪ್ರಶ್ನೆ ಹಾಕಿದರು.
ಕ್ಲಾನ್ ಎಂದು ಪ್ರಸಿದ್ಧವಾಗಿರುವ ಕು ಕ್ಲುಕ್ಸ್ ಕ್ಲಾನ್ ಎಂಬುದು ಅಮೆರಿಕದಲ್ಲಿನ ಹಿಂದಿನ ಮತ್ತು ಇಂದಿನ ಹಗೆ ಸಂಘಟನೆಗಳ ಹೆಸರಾಗಿದ್ದು, ಇದರ ಗುರಿಯು ಬಿಳಿ ಅಮೆರಿಕನ್ನರ ಹಕ್ಕನ್ನು ಬೆದರಿಕೆಯ ಮೂಲಕ ರಕ್ಷಿಸುವುದಾಗಿದೆ.
ಬಿಜೆಪಿಯನ್ನು ಕ್ಲಾನ್‌ಗೆ ಹೋಲಿಸಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಕ್ಲಾನ್‌ನ ಅರ್ಥವೇನೆಂದು ನಿಮಗೆ ಗೊತ್ತಿದೆ. ಇದರ ಬಗ್ಗೆ ನೀವು ಪ್ರಶ್ನಿಸಬೇಡಿ" ಎಂದು ನುಡಿದರು.
ಆಡ್ವಾಣಿ ಪ್ರಧಾನಿಯಾಗುವುದನ್ನು ಜನರು ಯಾಕೆ ನಿರಾಕರಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇದಕ್ಕೆ ಆಡ್ವಾಣಿ ಅವರೇ ಉತ್ತರಿಸಬೇಕು ಎಂದು ನುಡಿದರು.