ಲಷ್ಕರ್ ಇ ತೊಯ್ಬಾಗೆ ಸೇರಿದ ಉಗ್ರಗಾಮಿಯೊಬ್ಬ ಇಲ್ಲಿನ ಕಿಶ್ತ್‌ವಾರ್ ಜಿಲ್ಲೆಯ ಕೇಶ್‌ವಾನ್ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗಿನ ಜಾವ ಪೋಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹತನಾಗಿದ್ದಾನೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ಉಗ್ರಗಾಮಿಯನ್ನು ಮಹಮ್ಮದ್ ಯೂಸುಫ್ ಅಲಿಯಾಸ್ ಅಬು ಸಲೀಂ ಎಂದು ಗುರುತಿಸಲಾಗಿದೆ.
ಇಂದು ಬೆಳಗಿನ ಜಾವಕ್ಕೂ ಮೊದಲೇ ವಿಚಕ್ಷಣಾ ದಳದ ಖಚಿತ ಮಾಹಿತಿಯ ಆಧಾರದ ಮೇಲೆ ಜಮ್ಮುವಿನಿಂದ 290 ಕಿ.ಮೀ ದೂರದ ಕೇಶ್‌ವಾನ್ ಅರಣ್ಯ ಪ್ರದೇಶದಲ್ಲಿ ಸೇನೆ ಹಾಗೂ ಪೊಲೀಸರ ತಂಡ ಉಗ್ರರ ಜಾಡು ಹಿಡಿದು ಹೊರಟಿತ್ತು. ಈ ಸಂದರ್ಭ ಲಷ್ಕರ್ ಇ ತೊಯ್ಬಾದ ಉಗ್ರಗಾಮಿಗಳ ಜತೆಗೆ ಪೊಲೀಸ್ ಹಾಗೂ ಸೇನೆಗೆ ಭಾರೀ ಗುಂಡಿನ ಕಾಳಗ ನಡೆಯಿತು. ಈ ಸಂದರ್ಭ ಪೊಲೀಸರ ಗುಂಡಿಗೆ ಒಬ್ಬ ಉಗ್ರ ಬಲಿಯಾದನೆಂದು ಹೇಳಲಾಗಿದೆ.
ಬುಧವಾರ ನಡೆದ ಇನ್ನೊಂದು ಪೊಲೀಸ್ ಎನ್‌ಕೌಂಟರ್ ವೇಳೆ ರೀಸಿ ಜಿಲ್ಲೆಯ ಮೊಹೋರ್ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳು ಕಾಲ್ಕಿತ್ತಿದ್ದರೆ, ಒಬ್ಬ ಸೈನಿಕ, ಒಬ್ಬ ಉಗ್ರಗಾಮಿ ಹಾಗೂ ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಮೊಹೋರ್ ಗಡಿ ಪ್ರದೇಶದಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 10 ಉಗ್ರಗಾಮಿಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.