ಭಾರತೀಯ ಮಹಿಳೆಯರು ಪ್ರತಿಯೊಂದರಲ್ಲೂ ತಮ್ಮ ಶಕ್ತಿ, ಸಾಮರ್ಥ್ಯ ತೋರಿಸುತ್ತಿರುವುದು ಗೊತ್ತೇ ಇದೆ. ಇದೀಗ ಧೂಮಪಾನದಲ್ಲೂ ತಾವು ಮುಂದು ಎಂದು ತೋರಿಸಿಕೊಟ್ಟಿದ್ದಾರೆ! ಹೌದು. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಧೂಮಪಾನ ಮಾಡುವ ಮಹಿಳೆಯರಿರುವ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿದೆ!
'ಟೊಬ್ಯಾಕೋ ಅಟ್ಲಾಸ್' ಇತ್ತೀಚಿನ ದಾಖಲೆಗಳ ಪ್ರಕಾರ, ಭಾರತ ಅತಿ ಹೆಚ್ಚು ಧೂಮಪಾನ ಮಾಡುವ ಮಹಿಳೆಯರನ್ನು ಹೊಂದಿರುವ 20 ದೇಶಗಳ ಪೈಕಿ ಮೂರನೇ ದೇಶ ಎಂದು ಘೋಷಿಸಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ ಎರಡನೇ ಸ್ಥಾನದಲ್ಲಿ ಚೀನಾ ಇದೆ. ಅಮೆರಿಕದಲ್ಲಿ 2.3 ಕೋಟಿ ಮಂದಿ ಮಹಿಳೆಯರು ಧೂಮಪಾನದ ಅಭ್ಯಾಸ ಹೊಂದಿದ್ದರೆ, ಚೀನಾ 1.3 ಕೋಟಿ ಧೂಮಪಾನ ಪ್ರೇಮಿ ಮಹಿಳೆಯರನ್ನು ಹೊಂದಿದೆ. ಭಾರತ ಚೀನಾಕ್ಕಿಂತ ಕೇವಲ ಶೇ.20ರಷ್ಟು ಕಡಿಮೆ ಧೂಮಪಾನಿ ಮಹಿಳೆಯರನ್ನು ಹೊಂದಿರುವ ಕಾರಣ, ಸದ್ಯದಲ್ಲೇ ಚೀನಾವನ್ನೂ ಹಿಂದಿಕ್ಕಿದರೆ ಆಶ್ಚರ್ಯವಿಲ್ಲ.
ಭಾರತದ ನೆರೆರಾಷ್ಟ್ರ ಪಾಕಿಸ್ತಾನ ಭಾರತಕ್ಕೆ ಹೋಲಿಸಿದರೆ ಎಷ್ಟೋ ವಾಸಿ. ಪಾಕಿಸ್ತಾನ 20 ಲಕ್ಷ ಮಂದಿ ಧೂಮಪಾನಿ ಮಹಿಳೆಯರನ್ನು ಹೊಂದಿದ್ದು, ಅಟ್ಲಾಸ್ ವರದಿಯಲ್ಲಿ ಕೊನೆಯ ಸ್ಥಾನ ಅಂದರೆ 20ನೇ ಸ್ಥಾನದ್ಲಲಿದೆ.
ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಹಾಗೂ ವರ್ಲ್ಡ್ ಲಂಗ್ ಫೌಂಡೇಶನ್‌ಗಳಲ್ಲಿ ಟೋಬ್ಯಾಕೋ ಅಟ್ಲಾಸ್ ವರದಿ ಪ್ರಕಟಿಸಲಾಗಿದೆ. ಭಾರತದಲ್ಲಿ ಸಿಗರೇಟು ಸೇದುವ ಮಹಿಳೆಯರು ಇತರ ಮಹಿಳೆಯರಿಗಿಂತ ಸುಮಾರು ಎಂಟು ವರ್ಷ ಮುಂಚಿತವಾಗಿ ಸಾವನ್ನಪ್ಪುತ್ತಾರೆ ಎಂದೂ ಈ ವರದಿ ತಿಳಿಸಿದೆ.
ಅಟ್ಲಾಸ್ ವರದಿ ಪ್ರಕಾರ, ವಿಶ್ವದಲ್ಲಿ 250 ಮಿಲಿಯನ್ ಮಹಿಳೆಯರು ಪ್ರತಿದಿನ ಸಿಗರೇಟು ಸೇದುವ ಅಭ್ಯಾಸ ಉಳ್ಳವರಾಗಿದ್ದು, ಇದರಲ್ಲಿ ಶೇ.22 ಮಂದಿ ಶ್ರೀಮಂತ ರಾಷ್ಟ್ರಗಳ ನಿವಾಸಿಗಳಾಗಿದ್ದಾರೆ. ಶೇ.9ರಷ್ಟು ಮಂದಿ ಮಾತ್ರ ಬಡತನದ ಮೂಲ ಹೊಂದಿದವರು ಎಂದಿದೆ.
ಈ ವರದಿಗೆ ಪ್ರತಿಕ್ರಿಯಿಸಿದ ಹೀಲಿಸ್ ಸೆಕ್ಸಾರಿಯಾ ಇನ್ಸ್‌ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ.ಪಿ.ಸಿ.ಗುಪ್ತಾ, ಬಾರತದಲ್ಲಿ ದಿನೇ ದಿನೇ ಧೂಮಪಾನಿಗಳು ಹೆಚ್ಚುತ್ತಿರುವುದು ದುರದೃಷ್ಟಕರ. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ. ಜನಸಂಖ್ಯೆಯ ಜತೆಗೆ ಧೂಮಪಾನಿಗಳ ಶೇಕಡಾವಾರು ಪ್ರಮಾಣ ನೋಡಿದರೆ ಅಂತ ದೊಡ್ಡ ಪ್ರಮಾಣ ಇದಾಗಿಲ್ಲವಾದರೂ, ದಿನೇ ದಿನೇ ಹೊಸ ಹೊಸ ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರ ಸತ್ಯ. ಅದರಲ್ಲೂ ಪುರುಷರಿಗೆ ಹೋಲಿಸಿದರೆ, ಆರೋಗ್ಯದ ಮೇಲೆ ತಂಬಾಕು ಹೆಚ್ಚು ಪರಿಣಾಮ ಬೀರುವುದು ಮಹಿಳೆಯರ ಮೇಲೆಯೇ. ಏಕೆಂದರೆ ಮಹಿಳೆಯರು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಇದು ಮಹಿಳೆಯರ ಸೂಕ್ಷ್ಮ ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಗುಪ್ತಾ.
ತಂಬಾಕು ಸೇವಿಸುವ ಮಹಿಳೆಯಲ್ಲಿ ಆಕೆಯ ಗರ್ಭಕೋಶದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ. ಅದು ಮಗುವಿನ ತೂಕವನ್ನು ಇಳಿಸುತ್ತದೆ. ಇದರಿಂದ ಎಷ್ಟೋ ಬಾರಿ ಬೆಳವಣಿಗೆಯೇ ಆಗದ ಮಗು ಜನನ, ಅಂಗವಿಕಲ ಮಗು ಜನನ, ಅನೀಮಿಯಾದಂತಹ ರೋಗದಿಂದ ಬಳಲುವ ಮಗುವಿನ ಜನನ ಹಾಗೂ ಅವಧಿಗಿಂತ ಮುಂಚೆಯೇ ಹೆರಿಗೆ ಮುಂತಾದ ತೊಂದರೆ ಆಗುವ ಸಾಧ್ಯತೆಗಳು ಹೆಚ್ಚು ಎನ್ನುತ್ತಾರೆ ಗುಪ್ತಾ.
ಸರ್ಕಾರವೂ ಮಹಿಳೆಯರ ಮೇಲೆ ಹೆಚ್ಚು ಗಮನವಿರಿಸಿ ತಂಬಾಕು ಸೇವನೆ ವಿರೋಧಿ ಚಳುವಳಿಗಳ್ನನು ಹಮ್ಮಿಕೊಳ್ಳುತ್ತಿದೆ. ಧೂಮಪಾನ ಇತ್ತೀಚೆಗೆ ಕಾಲೇಜಿಗೆ ಹೋಗುತ್ತಿರುವ ಯುವತಿಯರಲ್ಲಿ ಹೆಚ್ಚುತ್ತಿದ್ದು, ತಂಬಾಕು ಉದ್ಯಮ ಈಗ ಯುವಜನರನ್ನೇ ತನ್ನ ಮಾರ್ಕೆಟಿಂಗ್ ದೃಷ್ಟಿಯಿಂದ ಗುರಿಯಾಗಿಸಿಕೊಂಡಿದೆ ಎನ್ನುತ್ತಾರೆ ಗುಪ್ತಾ.
ಅಟ್ಲಾಸ್ ವರದಿ ಪ್ರಕಾರ, ಪ್ರತಿ ವರ್ಷ ಆರು ಮಿಲಿಯನ್ ಮಂದಿ ಕ್ಯಾನ್ಸರ್ ರೋಗದಿಂದ ಸಾಯುತ್ತಿದ್ದಾರೆ. ಧೂಮಪಾನವೂ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲೊಂದು. ಧೂಮಪಾನಿಗಳ ಪೈಕಿ ಶೇ. 25 ಮಂದಿ ಬೇಗನೆ ಸಾವಿಗೀಡಾಗುತ್ತಿದ್ದಾರೆ. ಅಷ್ಟೇ ಅಲ್ಲ, ವಿಪರೀತ ಧೂಮಪಾನದಿಂದಾಗಿ ಯುವಕರಾಗಿದ್ದಾಗಲೇ ತಮ್ಮ ಕೆಲಸ ಮಾಡುವ ಶಕ್ತಿಯನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ದೇಶಗಳ್ಲಲಿ 2010ರಲ್ಲಿ ಧೂಮಪಾನಿಗಳ ಪೈಕಿ ಶೇ.72 ಮಂದಿ ತಂಬಾಕು ಸಂಬಂಧಿ ಕಾಯಿಲೆಗಳಿಂದ ಸಾವ್ನಪ್ಪಲಿದ್ದಾರೆ. ಇದು 2030ರಲ್ಲಿ ಶೇ.82ಕ್ಕೇರಲಿದೆ.