ರಾಂಗ್ ನಂಬರಿಗೆ ಕರೆ ಮಾಡಿದ್ದಕ್ಕೆ ದಲಿತನ ತಲೆಬೋಳಿಸಿ ಮೆರವಣಿಗೆ ಮಾಡಿದರು!
ದಲಿತ ಯುವಕನೊಬ್ಬ ತಿಳಿಯದೆ ರಾಂಗ್ ನಂಬರಿಗೆ ಕರೆ ಮಾಡಿದ್ದಕ್ಕಾಗಿ ಆತನನ್ನು ತಲೆಬೋಳಿಸಿ ಊರಿಡೀ ಮೆರವಣಿಗೆ ಮಾಡಿದ ದಾರುಣ ಘಟನೆ ಹರಿಯಾಣದ ಹಳ್ಳಿಯೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಭಿವಾನಿ ಜಿಲ್ಲೆಯ ಧನಿ ರಾಂಜಾಸ್ ಎಂಬ ಹಳ್ಳಿಯ ಸುರೇಶ್ ಎಂಬ ದಲಿತ ಯುವಕ ಈ ದೌರ್ಜನ್ಯಕ್ಕೊಳಗಾದವರು. ಸುರೇಶ್ ಅವರೇ ಹೇಳುವಂತೆ, ಸೋಮವಾರ ನಾನು ನನ್ನ ಪರಿಚಿತರೊಬ್ಬರಿಗೆ ಕರೆ ಮಾಡಲು ಮೊಬೈಲ್‌ನಲ್ಲಿ ನಂಬರ್ ಬರೆಯುತ್ತಿದ್ದೆ. ಅದೇ ಸಂದರ್ಭ ಯಾವುದೋ ಒಂದು ಅಂಕೆ ತಪ್ಪಾಗಿದ್ದುದು ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಅದು ತಪ್ಪಾಗಿ ಪಕ್ಕದ ಗ್ರಾಮದ ಧರ್ಮ ಸಿಂಗ್ ಅನ್ನುವ ವ್ಯಕ್ತಿಗೆ ಕರೆ ಹೋಗಿದೆ ಎಂದು ಆಮೇಲೆ ತಿಳಿಯಿತು. ಅತ್ತಣಿಂದ ರಾಂಗ್ ನಂಬರ್ ಎಂದು ತಿಳಿದ ತಕ್ಷಣ ಅವರ ಬಳಿ ಕ್ಷಮೆ ಕೇಳಿ ಕರೆಯನ್ನು ಸ್ಥಗಿತಗೊಳಿಸಿದ್ದೆ.
ಆದರೆ ಕ್ಷಮೆ ಕೇಳಿದರೂ ಅವರಿಗೆ ಸಾಕಾಗಿರಲಿಲ್ಲವೇನೋ. ಮಾರನೇ ದಿನ ಅಂದರೆ ಮಂಗಳವಾರ ಧರ್ಮ ಸಿಂಗ್ ಸೇರಿದಂತೆ ಆರು ಮಂದಿ ನನ್ನನ್ನು ಹುಡುಕಿಕೊಂಡು ಬಂದರು. ಸಿವಾನಿ ಗ್ರಾಮಕ್ಕೆ ನಾನು ಹೋಗುತ್ತಿರುವಾಗ ಹಾದಿಯಲ್ಲಿ ನನ್ನನ್ನು ಅಡ್ಡಕಟ್ಟಿ ಬಲವಂತವಾಗಿ ಕರೆದೊಯ್ದು ತಲೆಬೋಳಿಸಿದರು. ನಂತರ ಒಂದು ಬೈಕಿಗೆ ನನ್ನನ್ನು ಬಂಧಿಸಿ ಗ್ರಾಮದಲ್ಲಿಡೀ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲೂ ನನ್ನನ್ನು ವಿಪರೀತ ಥಳಿಸಿದರು. ಅಷ್ಟೇ ಅಲ್ಲ, ಅವರು ನನ್ನನ್ನು ವಿಧವಿಧವಾಗಿ ಚಿತ್ರಹಿಂಸೆಗೆ ಒಳಪಡಿಸಿದ್ದಾರೆ ಎಂದು ಘಟನೆಯನ್ನು ಸುರೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಪೊಲೀಸರು ಇನ್ನೂ ದೂರು ದಾಖಲಿಸಿಲ್ಲ. ಆದರೆ ಹಳ್ಳಿಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಅಲ್ಲದೆ, ದಲಿತರು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.