ಏರ್ ಇಂಡಿಯದಲ್ಲಿ ಕೆಲಸಮಾಡುತ್ತಿದ್ದ 40ರ ಪ್ರಾಯದ ಎಂಜಿನಿಯರ್‌ನನ್ನು ಪೊಲೀಸರು ಆಗಸ್ಟ್ 18ರಂದು ಬಂಧಿಸಿ ತನಿಖೆಗೊಳಪಡಿಸಿದಾಗ ಅವಿವಾಹಿತನೆಂಬ ಸೋಗುಹಾಕಿಕೊಂಡು 14 ಮಹಿಳೆಯರನ್ನು ಅವನು ವಿವಾಹವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ದ್ವಿಪತ್ನಿಯರನ್ನು ಕಟ್ಟಿಕೊಂಡು ಬದುಕು ನಡೆಸುವುದೇ ಕಷ್ಟ.
ಆದರೆ ಮುಂಬೈನ ಈ ವ್ಯಕ್ತಿ ಕಳೆದ ಕೆಲವು ವರ್ಷಗಳಿಂದ 14 ಹೆಂಡತಿಯರ ಜತೆ ಪ್ರತ್ಯೇಕವಾಗಿ ಜೀವನ ನಡೆಸುವ ದುಸ್ಸಾಹಸಕ್ಕೆ ಇಳಿದ. ತುಷಾರ್ ವಾಘ್‌ಮೇರ್ ಅಲಿಯಾಲ್ ತುಷಾರ್ ಬಾಪಟ್ ವಂಚನೆ ಬಯಲಾದ ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ. ವಾಘ್‌ಮೇರ್ ವಿರುದ್ಧ 9 ಅಧಿಕೃತ ದೂರುಗಳನ್ನು ದಾಖಲಿಸಲಾಗಿದೆ. ತಮಗೆ ಅಪಖ್ಯಾತಿ ತಗುಲುವುದೆಂದು ಹೆದರಿ ಇನ್ನೂ 9 ಮಂದಿ ದುರ್ದೈವಿಗಳು ದೂರು ನೀಡಲು ಸಹ ಮುಂದೆಬಂದಿಲ್ಲ.
ವೈವಾಹಿಕ ಪೋರ್ಟಲ್‌ನಲ್ಲಿ ತನ್ನ ಹೆಸರು ನೊಂದಾಯಿಸುವುದು ವಾಘ್‌ಮೇರ್ ಕಾರ್ಯವಿಧಾನವಾಗಿತ್ತು. 2006ರಲ್ಲಿ ತನ್ನ ಪತ್ನಿಗೆ ವಿಚ್ಥೇದನ ನೀಡಿದ್ದಾಗಿ ಸ್ವವಿವರದಲ್ಲಿ ತಿಳಿಸಿದ್ದ. ವಿಚ್ಛೇದಿತ ಅಥವಾ ವಿಧವೆಯರಾದ ಉದ್ಯೋಗಸ್ಥ ಬ್ರಾಹ್ಮಣ ವಧುವನ್ನು ತಾನು ವಿವಾಹವಾಗಲು ಬಯಸುವುದಾಗಿ ಅವನು ಪೋರ್ಟಲ್‌ನಲ್ಲಿ ತಿಳಿಸಿದ್ದ. ಕೊನೆಗೆ 14 ಪತ್ನಿಯರನ್ನು ನಿಭಾಯಿಸಲು 70,000 ರೂ. ಸಂಬಳ ಸಾಕಾಗದೇ ಆರ್ಥಿಕವಾಗಿ ಬಳಲಿದ ಅವನನ್ನು ಪತ್ನಿಯರೇ ನೋಡಿಕೊಂಡರು.
ವಾಘ್‌ಮೇರ್ ಹುಡುಗಿಯರ ವಿವರಗಳನ್ನು ವಿವಾಹ ಪೋರ್ಟಲ್‌ಗಳಲ್ಲಿ ಕಂಡು, ಲೋಖಂಡವಾಲಾ ಅಥವಾ ಜೋಗೇಶ್ವರಿಯ ಬಾಡಿಗೆ ನಿವಾಸಗಳಲ್ಲಿ ಪೋಷಕರ ಜತೆ ಭೇಟಿ ಏರ್ಪಡಿಸುತ್ತಿದ್ದ. ಅವನ ಉದ್ಯೋಗದ ವಿವರ, ಮಜಬೂತಾದ ಸಂಬಳ ಗಮನಿಸಿದ ಪೋಷಕರು ಅವನ ಹಿನ್ನೆಲೆ ಕೆದಕಲು ಯಾರೂ ಹೋಗಲೇ ಇಲ್ಲ. ವಾಘ್‌ಮೇರ್ ಪ್ರತಿಯೊಂದು ಪತ್ನಿಯ ಜತೆ ಮೂರು ದಿನ ಕಳೆಯುತ್ತಿದ್ದ. ಬಳಿಕ ಅಧಿಕೃತ ಸಭೆಗಾಗಿ ಬೇರೆ ರಾಜ್ಯಗಳಿಗೆ ಪ್ರಯಾಣಿಸಬೇಕೆಂದು ಹೇಳಿ ಹೋದವನು ಇನ್ನೊಬ್ಬ ಪತ್ನಿಯ ಜತೆ ಕಾಲ ಕಳೆಯುತ್ತಿದ್ದ.
ಹೀಗೆ 14 ಪತ್ನಿಯರ ಜತೆ ಅವನ ಸರಸಸಲ್ಲಾಪ ಮುಂದುವರಿದಿತ್ತು. ವಾಘ‌್‌ಮೇರ್ ತನ್ನ ಉಪನಾಮವನ್ನು ಬಾಪಟ್ ಎಂದು ಬದಲಿಕೊಂಡು ಬ್ರಾಹ್ಮಣ ಹುಡುಗಿಯರನ್ನು ಮದುವೆಯಾದನೆಂದು ಪೊಲೀಸರು ತಿಳಿಸಿದ್ದಾರೆ. ವಾಘ್‌ಮೇರ್‌ನ ಕೊನೆಯ ಪತ್ನಿಗೆ ವಾಘ್‌ಮೇರ್ ನಡವಳಿಕೆಗಳ ಬಗ್ಗೆ ಸಂಶಯಗೊಂಡು ಅವನ ಲೋಖಂಡವಾಲಾ ಫ್ಲಾಟ್‌ಗೆ ಭೇಟಿ ಕೊಟ್ಟಾಗ ಇನ್ನೊಬ್ಬ ಮಹಿಳೆ ಪತ್ತೆಯಾದಳು. ಏಪ್ರಿಲ್ 2009ರಲ್ಲಿ ವಾಘ್‌ಮೇರ್ ತನ್ನನ್ನು ಮದುವೆಯಾಗಿದ್ದಾಗಿ ಆಕೆ ಹೇಳಿದ್ದಾಳೆಂದು ಕೊನೆಯ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು, ಈಗ ವಾಘ್‌ಮೇರ್ ಪೊಲೀಸರ ಅತಿಥಿಯಾಗಿದ್ದಾನೆ.