ಪಂಚಾಯತ್‌ಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ.50ಕ್ಕೇರಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಂಪುಟ ಗುರುವಾರ ಕೈಗೊಂಡಿದೆ. ಸಂಪುಟದಲ್ಲಿ ಪರಿಗಣನೆಗಾಗಿ ಮಂಡಿಸಲಾಗಿದ್ದ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ ಎಂಬುದಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.
ಇದರಿಂದಾಗಿ ಸಂವಿಧಾನದ ವಿಧಿ 243(ಡಿ)ಗೆ ತಿದ್ದುಪಡಿ ತರುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ಪ್ರಸಕ್ತ ವಿಧಿಯು ಮಹಿಳೆಯರಿಗೆ ಮೂರನೆ ಒಂದರಷ್ಟು ಮೀಸಲಾತಿ ನೀಡುತ್ತದೆ.
ಪಂಚಾಯತ್‌ಗಳು ನಗರಗಳ ಸ್ಥಳೀಯ ಮಂಡಳಿಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಒದಗಿಸಲು ಸಾಂವಿಧಾನಿಕ ತಿದ್ದುಪಡಿ ತರಲಾಗುವುದು ಎಂಬುದಾಗಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಜೂನ್ 4ರಂದು ಮಾತನಾಡಿದ್ದ ವೇಳೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿಳಿಸಿದ್ದರು.
ಮಹಿಳೆಯರು ಜಾತಿ, ವರ್ಗ ಹಾಗೂ ಲಿಂಗಭೇದಗಳನ್ನು ಅನುಭವಿಸುತ್ತಿರುವ ಕಾರಣ ಪಂಚಾಯತ್‌ಗಳಲ್ಲಿ ಮತ್ತು ಸ್ಥಳೀಯಾಡಳಿತಗಳಲ್ಲಿ ಮೀಸಲಾತಿಯನ್ನು ವಿಸ್ತರಿಸುವ ಕಾರಣ ಇನ್ನಷ್ಟು ಮಹಿಳೆಯರು ಸಾರ್ವಜನಿಕ ರಂಗಗಳಲ್ಲಿ ಪ್ರವೇಶ ಮಾಡುತ್ತಾರೆ ಎಂದು ಸೋನಿ ನುಡಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಬಿಹಾರ, ಉತ್ತರಖಾಂಡ್, ಹಿಮಾಚಲ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಈಗಾಗಲೇ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಶೇ.50 ಮೀಸಲಾತಿ ಒದಗಿಸಲಾಗಿದೆ. ಇದೇ ವೇಳೆ ರಾಜಸ್ಥಾನವು 2010ರಲ್ಲಿ ನಡೆಯಲ್ಲಿರುವ ಪಂಚಾಯತ್ ಚುನಾವಣೆಯಲ್ಲಿ ಈ ಪ್ರಸ್ತಾಪವನ್ನು ಜಾರಿಗೆ ತರುವುದಾಗಿ ಹೇಳಿದೆ. ಅಂತೆಯೇ ಕೇರಳವೂ ಸಹ ಸ್ಥಳೀಯಾಡಳಿತೆಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡುವುದಾಗಿ ಘೋಷಿಸಿದೆ.