ಮೊಹಮದ್ ಅಲಿ ಜಿನ್ನಾ ಕುರಿತ ಜಸ್ವಂತ್ ಸಿಂಗ್ ಪುಸ್ತಕದಲ್ಲಿ ಜಿನ್ನಾರನ್ನು ವೈಭವೀಕರಿಸಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರು ಕೆಡಿಸುವ ಪ್ರಯತ್ನಗಳನ್ನು ಮಾಡಲಾಗಿದೆಯೆಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣವ್ ಮುಖರ್ಜಿ ಗುರುವಾರ ಟೀಕಿಸಿದ್ದಾರೆ. ಕೆಲವು ಸಂಕುಚಿತ ಪಕ್ಷಪಾತದ ಹಿತಾಸಕ್ತಿಗಾಗಿ ಇತಿಹಾಸವನ್ನೇ ತಿರುಚುವ ದುರುದ್ದೇಶದ ಪ್ರಯತ್ನ ಮಾಡಲಾಗಿದೆಯೆಂದು ಅವರು ಹೇಳಿದ್ದಾರೆ.
ಹಿಂದು ಮಹಸಭಾ ಮತ್ತು ಬಳಿಕದ ದಿನಗಳಲ್ಲಿ ಜನಸಂಘ ಮತ್ತು ಬಿಜೆಪಿಯ ಹುಟ್ಟಿಗೆ ಕಾರಣಕರ್ತರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಾಕಿಸ್ತಾನ ಸಂಸ್ಥಾಪಕ ಜಿನ್ನಾರಿಗೆ ದೇಶವಿಭಜನೆಯಲ್ಲಿ ಯಾವ ಪಾತ್ರವೂ ಇಲ್ಲವೆಂದು ಹೇಳುವ ಪ್ರಯತ್ನಗಳ ವಿರುದ್ಧ ಪ್ರಣವ್ ವಾಗ್ದಾಳಿ ಮಾಡಿದರು. ಬಿಜೆಪಿ ನಾಯಕ ಆಡ್ವಾಣಿಯಿಂದ ಪಾಕಿಸ್ತಾನಕ್ಕೆ ವಿವಾದಾತ್ಮಕ ಭೇಟಿ ಮತ್ತು ಜಿನ್ನಾ ಕುರಿತ ಜಸ್ವಂತ್ ಸಿಂಗ್ ಪುಸ್ತಕದ ಬಗ್ಗೆ ಅವರು ಕಟಕಿಯಾಡಿ, ಜಿನ್ನಾರನ್ನು ವೈಭವೀಕರಿಸುವ ಮನಸ್ಥಿತಿ ಕುರಿತು ವಿವರಣೆ ನೀಡಬೇಕೆಂದು ಕೇಳಿದರು. ಆಡ್ವಾಣಿ ಪಾಕಿಸ್ತಾನಕ್ಕೆ ಹೋಗಿ ಜಿನ್ನಾ ಜಾತ್ಯತೀತ ಎಂದು ಪತ್ತೆಮಾಡುತ್ತಾರೆ.
ಜಸ್ವಂತ್ ಸಿಂಗ್ ಇದ್ದಕ್ಕಿದ್ದಂತೆ 'ಜಿನ್ನಾ ಏಕೀಕೃತ ಭಾರತ ಬಯಸಿದ್ದರು. ಅವರು ವಿಭಜನೆಗೆ ಜವಾಬ್ದಾರಿಯಲ್ಲ' ಎಂದು ಶೋಧಿಸುತ್ತಾರೆ. ಇವೆಲ್ಲಾ ಐತಿಹಾಸಿಕವಾಗಿ ಸರಿಯಲ್ಲ ಎಂದು ಸಿಂಗ್ ಕೃತಿಗೆ ಕಾಂಗ್ರೆಸ್‌ನಿಂದ ದೊಡ್ಡ ಮಟ್ಟದ ಪ್ರತಿಕ್ರಿಯೆ ನೀಡುತ್ತಾ ಪ್ರಣವ್ ಹೇಳಿದ್ದಾರೆ. ವಿಭಜನೆಗೆ ಸಂಬಂಧಿಸಿದ ಸತ್ಯಾಂಶಗಳನ್ನು ಕಡೆಗಣಿಸಿ ಸಂಕುಚಿತ ಮನೋಭಾವದಿಂದ ಇತಿಹಾಸವನ್ನು ತಿರುಚಲು ಸಂಪೂರ್ಣ ದುರುದ್ದೇಶದ ಪ್ರಚಾರ ಎಂದು ಮುಖರ್ಜಿ ಹೇಳಿದ್ದಾರೆ.