ಕಾಂಧಹಾರ್: ಉಗ್ರರ ಬಿಡುಗಡೆ ಆಡ್ವಾಣಿಗೆ ತಿಳಿದಿತ್ತು- ಬ್ರಿಜೇಶ್
ನವದೆಹಲಿ, ಗುರುವಾರ, 27 ಆಗಸ್ಟ್ 2009( 17:47 IST )
ಎನ್‌ಡಿಎ ಆಡಳಿತಾವಧಿಯಲ್ಲಿ ನಡೆದ ಕಾಂಧಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಒತ್ತೆಯಾಳುಗಳಾಗಿದ್ದ ಪ್ರಯಾಣಿಕರ ಸುರಕ್ಷಿತ ಬಿಡುಗಡೆಗಾಗಿ ಮೂವರು ಉಗ್ರರನ್ನು ಬಿಡುಗಡೆ ಮಾಡಿ ಅವರನ್ನು ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರೊಂದಿಗೆ ಕಳುಹಿಸುವ ನಿರ್ಧಾರ ಆಗಿನ ಗೃಹಸಚಿವ ಎಲ್.ಕೆ. ಆಡ್ವಾಣಿ ಅವರಿಗೆ ಚೆನ್ನಾಗಿ ತಿಳಿದಿತ್ತು ಎಂಬುದಾಗಿ ಮಾಜಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಬ್ರಿಜೇಶ್ ಮಿಶ್ರಾ ಹೇಳಿದ್ದಾರೆ.
ಈ ನಿರ್ಧಾರವನ್ನು ಭದ್ರತಾ ಕುರಿತ ಸಂಪುಟ ಸಮಿತಿಯ (ಸಿಸಿಎಸ್) ಸಭೆಯಲ್ಲಿ ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಪ್ರಧಾನಮಂತ್ರಿ, ಗೃಹಸಚಿವ, ಹಣಕಾಸು ಸಚಿವ, ವಿದೇಶಾಂಗ ಸಚಿವ ಹಾಗೂ ರಕ್ಷಣಾ ಸಚಿವರು ಪಾಲ್ಗೊಂಡಿದ್ದರು ಎಂಬುದಾಗಿ ಅವರು ಹೇಳಿದ್ದಾರೆ.
"ವಿಮಾನದಲ್ಲಿದ್ದ 160ಕ್ಕೂ ಅಧಿಕ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಜೀವ ಉಳಿಸಲು ಭಾರತದ ಜೈಲಿನಲ್ಲಿದ್ದು ಮೂರು ಭಾರೀ ಉಗ್ರರನ್ನು ಬಿಡುಗಡೆ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಅವಿರೋಧ ನಿರ್ಧಾರ ಕೈಗೊಳ್ಳಲಾಗಿತ್ತು" ಎಂಬುದಾಗಿ ಬ್ರಿಜೇಶ್ ಅವರು ಕರಣ್ ಥಾಪರ್ ಅವರ ಡೆವಿಲ್ಸ್ ಅಡ್ವೋಕೇಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದೊಂದು ಅವಿರೋಧ ನಿರ್ಣವಾಗಿತ್ತೇ ಎಂಬ ಪ್ರಶ್ನೆಗೆ ಅವರು 'ಖಂಡಿತ' ಎಂಬುದಾಗಿ ಉತ್ತರಿಸಿದ್ದಾರೆ. ಅಲ್ಲದೆ ಆಡ್ವಾಣಿ ಇದರ ಅಂಗವಾಗಿದ್ದರು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಿಕಟರಾಗಿದ್ದ ಬ್ರಿಜೇಶ್ ಅವರು, ವಿಮಾನದಲ್ಲಿದ್ದ ಒತ್ತೆಯಾಳುಗಳ ಬಿಡುಗಡೆಗಾಗಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರನ್ನು ಕಳುಹಿಸುವ ಕುರಿತು ಆಡ್ವಾಣಿ ಅವರಿಗೆ ತಿಳಿದಿತ್ತು ಎಂದು ಪುನರುಚ್ಚರಿಸಿದ್ದಾರೆ.
ಕೊನೆಯಗಳಿಗೆಯಲ್ಲಿ ಯಾವುದೇ ಸಂಕೀರ್ಣತೆ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವರನ್ನು ಕಳುಹಿಸುವ ನಿರ್ಧಾರ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕಳೆದಬಾರಿಯ ಲೋಕಸಭಾ ಚುನಾವಣೆ ವೇಳೆಗೆ ಆಡ್ವಾಣಿ ಅವರು, ಕಾಂಧಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಉಗ್ರರನ್ನು ಜಸ್ವಂತ್ ಸಿಂಗ್ ಅವರೊಂದಿಗೆ ಕಳುಹಿಸುವ ನಿರ್ಧಾರ ತನಗೆ ತಿಳಿದಿರಲಿಲ್ಲ ಎಂದು ಪ್ರತಿಪಾದಿಸಿದ್ದರು.