ಬಿಜೆಪಿ ಹಿರಿಯ ನಾಯಕ ಅರುಣ್ ಶೌರಿ ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿರುವ ಬಳಿಕ ಇದೀಗ ಯಶ್ವಂತ್ ಸಿನ್ಹಾ ಅವರೂ ಶೃತಿ ಸೇರಿಸಿದ್ದಾರೆ. ರಾಜ್‌ನಾಥ್ ಇನ್ನೊಮ್ಮೆ ಅಧ್ಯಕ್ಷರಾಗುವುದಿಲ್ಲ ಎಂದು ಸಿನ್ಹಾ ಹೇಳಿದ್ದಾರೆ.
ಪಕ್ಷದೊಳಗಿನ ಬಿಕ್ಕಟ್ಟಿನ ಕುರಿತು ಗುರವಾರ ಪ್ರಥಮವಾಗಿ ಪ್ರತಿಕ್ರಿಯಿಸಿರುವ ಯಶ್ವಂತ್ ಸಿನ್ಹಾ ಅವರು ಜಸ್ವಂತ್ ಸಿಂಗ್ ಅವರನ್ನು ಉಚ್ಚಾಟಿಸಿರುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ. ಅವರನ್ನು ಪಕ್ಷದಿಂದ ಹೊರಹಾಕಿರುವ ವಿಧಾನ ಸರಿಇಲ್ಲ ಎಂದು ನುಡಿದ ಅವರು, ಜಸ್ವಂತ್‌ರನ್ನು ಮತ್ತೆ ಪಕ್ಷಕ್ಕೆ ಮರಳಿ ಕರೆತಂದರೆ ಸಂತೋಷವಾಗುತ್ತದೆ ಎಂದು ನುಡಿದರು. ಇದಲ್ಲದೆ ಗುಜರಾತಿನಲ್ಲಿ ಜಸ್ವಂತ್‌ರ ಪುಸ್ತಕವನ್ನು ನಿಷೇಧಿಸಿರುವ ಕ್ರಮವೂ ಸರಿಇಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಕಾಂಧಾಹಾರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯಶ್ವಂತ್ ಸಿನ್ಹಾ, ಜಸ್ವಂತ್ ಸಿಂಗ್ ಉಗ್ರರೊಂದಿಗೆ ಕಾಂಧಹಾರ್‌ಗೆ ತೆರಳುವ ವಿಚಾರ ಆಡ್ವಾಣಿಯವರಿಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಯಶ್ವಂತ್ ಸಿನ್ಹಾ ಆಗಿನ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.
ಜಸ್ವಂತ್‌ರನ್ನು ಕಾಂಧಹಾರ್‌ಗೆ ಕಳುಹಿಸುವ ವಿಚಾರ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದು, ಎಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರು ತನಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಹೇಳಿರುವುದು ಯಾಕೆಂದು ಅರ್ಥವಾಗುತ್ತಿಲ್ಲ ಎಂದು ಖಾಸಗೀ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.