ತಾನು ಬರೆದಿರುವ ಮೊಹಮ್ಮದ್ ಅಲಿ ಜಿನ್ನಾ ಪುಸ್ತಕವನ್ನು ನಿಷೇಧಿಸಿರುವ ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿಯಿಂದ ಉಚ್ಚಾಟಿರಾಗಿರುವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
'ಜಿನ್ನಾ: ಇಂಡಿಯಾ. ಪಾರ್ಟಿಶನ್, ಇಂಡಿಪೆಂಡೆನ್ಸ್' ಪುಸ್ತಕದ ಸಹ ಪ್ರಕಾಶಕರಾದ ರೂಪ ಅವರೊಂದಿಗೆ ಸಿಂಗ್ ಅವರು ನಿಷೇಧದವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಪುಸ್ತಕದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣ ನೀಡಿ ಪುಸ್ತಕ ಬಿಡುಗಡೆಯಾದ ಎರಡು ದಿನದ ಬಳಿಕ ಆಗಸ್ಟ್ 19ರಂದು ಗುಜರಾತ್ ಸರ್ಕಾರ ಈ ಪುಸ್ತಕದ ವಿರುದ್ಧ ನಿಷೇಧ ಹೇರಿತ್ತು.
ಈ ಪುಸ್ತಕವನ್ನು ನಿಷೇಧಿಸಿರುವ ಗುಜರಾತ್ ಸರ್ಕಾರದ ಅಧಿಸೂಚನೆಯಲ್ಲಿ ಯಾವ ವಿಷಯದ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಲಾಗಿಲ್ಲ ಮತ್ತು ಪುಸ್ತಕವನ್ನು ಯಾರೂ ಓದದೆಯೇ ನಿಷೇಧ ಹೇರಲಾಗಿದೆ ಎಂದು ಆರ್ಜಿಯಲ್ಲಿ ದೂರಲಾಗಿದೆ.
ವಲ್ಲಭಭಾಯ್ ಅವರ ರಾಷ್ಟ್ರಭಕ್ತಿಯನ್ನು ಪುಸ್ತಕದಲ್ಲಿ ಪ್ರಶ್ನಿಸಲಾಗಿದ್ದು, ಅವರ ಪ್ರತಿಷ್ಠೆಗೆ ಧಕ್ಕೆಯುಂಟುಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಆಪಾದಿಸಿತ್ತು. ಸಿಂಗ್ ಅವರನ್ನು ಬಿಜೆಪಿಯು ಉಚ್ಚಾಟಿಸಿದ ಗಂಟೆಗಳೊಳಗಾಗಿ ಮೋದಿ ಸರ್ಕಾರ ಈ ಪುಸ್ತಕದ ವಿರುದ್ಧ ನಿಷೇಧ ಹೇರಿತ್ತು.