ಪೋಕ್ರಾನ್- II ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿರಲೇ ಇಲ್ಲ, ಅದು ನಿರೀಕ್ಷೆಗಿಂತ ಭಾರೀ ಕೆಳಮಟ್ಟದಲ್ಲಿತ್ತು ಎಂಬ ಡಿಆರ್‌ಡಿಒ ವಿಜ್ಞಾನಿ ಸಂತಾನಂ ಹೇಳಿಕೆಯನ್ನು ಮಾಜಿ ರಾಷ್ಟ್ರಪತಿ ಡಾ|ಎ.ಪಿ.ಜೆ ಅಬ್ದುಲ್ ಕಲಾಂ ತಳ್ಳಿಹಾಕಿದ್ದಾರೆ. ಜತೆಗೆ, ಪೋಕ್ರಾನ್ ಅಣುಸ್ಪೋಟ ನಿರೀಕ್ಷೆಯ ಮಟ್ಟ ತಲುಪಿ ಯಶಸ್ವಿಯಾಗಿತ್ತು ಎಂದು ಹೇಳಿದ್ದಾರೆ.
1998ರ ಅಣ್ವಸ್ತ್ರ ಪರೀಕ್ಷೆಯ ನಂತರ ತುಂಬ ಕೂಲಂಕುಷವಾಗಿ ಅದ್ಯಯನ ಮಾಡಲಾಗಿದೆ. ಅಣ್ವಸ್ತ್ರ ಪರೀಕ್ಷೆಯಿಂದ ಬಿಡುಗಡೆಯಾದ ಸಿಸ್ಮಿಕ್ ಹಾಗೂ ರೇಡಿಯೋ ಆಕ್ಟಿವ್ ಶಕ್ತಿಯ ಮೂಲಕ ಅಣ್ವಸ್ತ್ರ ಪರೀಕ್ಷೆಯ ಯಶಸ್ಸನ್ನು ಅಳೆಯಲಾಗಿದೆ. ಹಾಗೂ ಪರೀಕ್ಷೆ ಅಂದುಕೊಂಡ ಹಾಗೆಯೇ ಮೂಡಿಬಂದಿತ್ತು. ಜತೆಗೆ ಯಶಸ್ವಿಯೂ ಆಗಿತ್ತು ಎಂದು ಸಂತಾನಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
1998ರಲ್ಲಿ ಪೋಕ್ರಾಣ್ ಅಣ್ವಸ್ತ್ರ ಪರೀಕ್ಷೆ ನಡೆಯುವ ಸಂದರ್ಭ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಪ್ರಧಾನ ನಿರ್ದೇಶಕರಾಗಿದ್ದರು ಹಾಗೂ ಅಣ್ವಸ್ತ್ರ ಪರೀಕ್ಷೆಯ ಸಂದರ್ಭ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಇಷ್ಟೇ ಅಲ್ಲ. ಕಲಾಂ ರಕ್ಷಣಾ ಸಚಿವ ಆರ್. ಚಿದಂಬರಂ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಅವರು ಈ ಹಿಂದೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿದ್ದವರು. ಅಲ್ಲದೆ, ಬಾಬಾ ಅಣ್ವಸ್ತ್ರ ಸಂಶೋಧನಾ ಕೇಂದ್ರದಲ್ಲಿಯೂ ನಿರ್ದೇಶಕರಾಗಿ ಪೋಕ್ರಾನ್-IIರ ಅಣ್ವಸ್ತ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಳೆದ ವರ್ಷವೇ ಕಲಾಂ ಅವರು, ಭಾರತ ಮತ್ತೊಮ್ಮೆ ಅಣ್ವಸ್ತ್ರ ಪ್ರಯೋಗ ಮಾಡುವ ಅಗತ್ಯವೇ ಇಲ್ಲ. ಈಗಾಗಲೇ ಅಣ್ವಸ್ತ್ರ ಶಕ್ತಿಯಲ್ಲಿ ಭಾರತ ಬಲಶಾಲಿಯಾಗಿದೆ ಎಂದಿದ್ದರು. ಆದರೆ ಈಗ ಡಿಆರ್‌ಡಿಒ ವಿಜ್ಞಾನಿ ಸಂತಾನಂ ಅವರು, ಭಾರತವು ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ (ಸಿಟಿಬಿಟಿ) ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಇನ್ನಷ್ಟು ಅಣ್ವಸ್ತ್ರ ಪರೀಕ್ಷೆಗಳನ್ನು ಮಾಡಬೇಕು ಮತ್ತು ಅಣ್ವಸ್ತ್ರ ಯೋಜನೆಯ ಕುರಿತು ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದು ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ಸಂಶಯಾಸ್ಪದವಾಗಿ ನೋಡುವಂತಾಗಿತ್ತು.
ಅಣ್ವಸ್ತ್ರ ಪರೀಕ್ಷೆ ವೇಳೆಗೆ ಅಣ್ವಸ್ತ್ರ ಪರೀಕ್ಷಾ ಸ್ಥಳ ಸಿದ್ಧತೆಯ ನಿರ್ದೇಶಕರಾಗಿದ್ದ ಸಂತಾನಂ ಅವರು ಥರ್ಮೋನ್ಯೂಕ್ಲಿಯರ್ ಪರೀಕ್ಷೆ ಅಥವಾ ಹೈಡ್ರೋಜನ್ ಬಾಂಬ್‍ನ ಪರೀಕ್ಷಾ ಫಲಿತಾಂಶವು ಹೇಳಿಕೊಂಡದ್ದಕ್ಕಿಂತ ತುಂಬ ಕಮ್ಮಿ ಇತ್ತು ಎಂಬುದಾಗಿ ಹೇಳಿದ್ದು ಭಾರತದ ರಕ್ಷಣಾ ಸಚಿವಾಲಯವನ್ನು ಕೆರಳಿಸಿತ್ತು.