ಹನಿಮೂನ್ ಪತಿಯರಿಂದ ತಿರಸ್ಕೃತರಾದ ಮಹಿಳೆಯರಿಗೆ ಮಧ್ಯಸ್ಥಿಕೆ ಘಟಕವೊಂದನ್ನು ರಾಷ್ಟ್ರೀಯ ಮಹಿಳಾ ಆಯೋಗ ಆರಂಭಿಸಿದೆ. ಅನಿವಾಸಿ ಭಾರತೀಯ ಪತಿಗಳು ವಿವಾಹವಾದ ಸ್ವಲ್ಪ ಸಮಯದಲ್ಲೇ ಪತ್ನಿಯರನ್ನು ತ್ಯಜಿಸುವ ಹವ್ಯಾಸದ ವಿರುದ್ಧ ಎನ್‌ಆರ್‌ಐ ಪತಿಗಳಿಗೆ ವಿವಾಹವಾದ ಮಹಿಳೆಯರು ನೀಡಿದ ದೂರುಗಳನ್ನು ಆಯೋಗ ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕರಿಸಿದೆ.
ದೂರುಗಳನ್ನು ಸ್ವೀಕರಿಸಿ ದಂಪತಿಯ ಮಧ್ಯೆ ಮಧ್ಯಸ್ಥಿಕೆ ವಹಿಸಲು ಸಮನ್ವಯ ಏಜೆನ್ಸಿಯಾಗಿ ಘಟಕ ಕೆಲಸ ಮಾಡುವುದೆಂದು ನಿರೀಕ್ಷಿಸಲಾಗಿದೆ.ಸಂಧಾನ, ಉಭಯತ್ರರ ನಡುವೆ ಮಧ್ಯಸ್ಥಿಕೆ, ದೂರುದಾರರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಲಹೆ ಸೇರಿದಂತೆ ದೂರುದಾರರಿಗೆ ಸಾಧ್ಯವಾದ ಎಲ್ಲ ನೆರವನ್ನು ನೀಡುವುದಾಗಿ ಎನ್‌ಸಿಡಬ್ಲ್ಯು ಅಧ್ಯಕ್ಷೆ ಗಿರಿಜಾ ವ್ಯಾಸ್ ತಿಳಿಸಿದ್ದಾರೆ.
ಎನ್‌ಜಿಒಗಳ ಜತೆ ಮತ್ತು ಭಾರತ ಮತ್ತು ವಿದೇಶಗಳ ಸಮುದಾಯ ಸಂಘಟನೆಗಳು ಹಾಗೂ ರಾಜ್ಯ ಮಹಿಳಾ ಆಯೋಗಗಳ ಜತೆ ಸಂಬಂಧ ಹೊಂದುವ ಮೂಲಕ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಮಹಿಳಾ ಆಯೋಗ ಕಾರ್ಯೋನ್ಮುಖ ಆಗುತ್ತದೆಂದು ಅವರು ಹೇಳಿದ್ದಾರೆ. ಅನಿವಾಸಿ ಭಾರತೀಯ ಪತಿಯನ್ನು ವಿವಾಹವಾದ ಮಹಿಳೆ ಕೆಲವು ಬಾರಿ ಗರ್ಭವತಿಯಾಗಿ ಸ್ವತಃ ಪೋಷಕರೇ ತಿರಸ್ಕರಿಸಿದ ಸಂದರ್ಭದಲ್ಲಿ ಮಹಿಳೆಯರ ಜತೆ ಸಮಾಲೋಚನೆಗೆ ವಕೀಲರನ್ನು ಆಯೋಗ ಗೊತ್ತುಮಾಡಲಿದೆ.
10 ಎನ್‌ಐರ್‌ಐ ಮದುವೆಗಳಲ್ಲಿ ಎರಡು ಮದುವೆಗಳು ಮಧುಚಂದ್ರದ ಬಳಿಕ ಪತ್ನಿಯನ್ನು ತ್ಯಜಿಸುವ ಪ್ರಕರಣಗಳಲ್ಲಿ ಅಂತ್ಯಗೊಳ್ಳುತ್ತದೆ. ನಮ್ಮ ಘಟಕದ ಮೂಲಕ ವಿದೇಶದಲ್ಲಿರುವ ಎಲ್ಲ ರಾಯಭಾರ ಕಚೇರಿಗಳ ಜತೆ ಮಾತನಾಡಿ, ಭಾರತೀಯ ವಿವಾಹಿತ ದಂಪತಿಯ ರಿಜಿಸ್ಟರ್ ಕಾಯ್ದುಕೊಂಡು ಅದನ್ನು ಕಾಲಕಾಲಕ್ಕೆ ತಪಾಸಣೆ ಮಾಡುವಂತೆ ಹೇಳಲಾಗುವುದು ಎಂದು ನುಡಿದರು.