26/11 ಮುಂಬೈ ಭಯೋತ್ಪಾದನೆ ದಾಳಿಗೆ ಸಂಬಂಧಪಟ್ಟ ಆರೋಪಿಗಳಾದ ಭಾರತೀಯ ಪೌರರಾದ ಫಾಹೀಂ ಮತ್ತು ಸಬಾವುದ್ದೀನ್ ವಿರುದ್ಧ ಹೇಳಿಕೆ ನೀಡಿರುವ ಮುಖ್ಯ ಸಾಕ್ಷಿ ನಾಪತ್ತೆಯಾಗಿದ್ದಾನೆಂದು ಪ್ರಾಸಿಕ್ಯೂಷನ್ ವಿಶೇಷ ಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. 26/11 ಮುಂಬೈ ದಾಳಿ ಸಂಚಿನಲ್ಲಿ ಸಬಾಹುದ್ದೀನ್ ಮತ್ತು ಅನ್ಸಾರಿ ಪಾತ್ರದ ಬಗ್ಗೆ ನುರೂದ್ದಿನ್ ಮೆಹಬೂಬ್ ಶೇಕ್ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಗಮನಸೆಳೆದಿದ್ದ.
ಕೋರ್ಟ್ ಬೆಳಿಗ್ಗೆ 11 ಗಂಟೆಗೆ ಸಾಕ್ಷಿಯನ್ನು ಪಾಟೀಸವಾಲಿಗೆ ಕರೆದಾಗ ಸಾಕ್ಷಿ ನಾಪತ್ತೆಯಾಗಿರುವುದು ಕಂಡುಬಂತು. ಸಾಕ್ಷಿಯನ್ನು ಕರೆತರಲು ಕ್ರೈಮ್ ಬ್ರಾಂಚ್ ಅಧಿಕಾರಿಗಳು ತೆರಳಿದಾಗ ಶೇಖ್ ನಸುಕಿನಲ್ಲೇ ಮನೆ ಬಿಟ್ಟಿದ್ದಾನೆಂದು ಅವನ ಪತ್ನಿ ತಿಳಿಸಿದರೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ತಿಳಿಸಿದರು. ಇದೊಂದು ಗಂಭೀರ ವಿಷಯ ಎಂದು ಪ್ರತಿಕ್ರಿಯಿಸಿದ ನ್ಯಾಯಾಧೀಶ ತಹಾಲಿಯಾನಿ, ಕೋರ್ಟ್ ಯಾವ ಹೆಜ್ಜೆಗಳನ್ನು ಇಡುತ್ತದೆಂದು ಬಳಿಕ ತಿಳಿಸುವುದಾಗಿ ನುಡಿದರು.
ಫಾಹೀಂ ಮತ್ತು ಸಬಾವುದ್ದೀನ್ ಇಬ್ಬರೂ ಭಾರತೀಯ ಪೌರರಾಗಿದ್ದು, ಪಾಕಿಸ್ತಾನದ ಪೌರ, ಮುಂಬೈ ದಾಳಿಯ ಆರೋಪಿ ಅಜ್ಮಲ್ ಅಮೀರ್ ಕಸಬ್ ಜತೆ ವಿಚಾರಣೆ ಎದುರಿಸುತ್ತಿದ್ದಾರೆ..ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಬೇಟೆ ಆರಂಭಿಸಿದ್ದಾರೆ. ಮುಂಬೈ ಚಾಲಕ ಶೇಖ್ ತಾನು ಮತ್ತು ಅನ್ಸಾರಿ ಮುಂಬೈನಲ್ಲಿ ಒಂದೇ ಬೀದಿಯ ನಿವಾಸಿಗಳಾಗಿದ್ದು 30 ವರ್ಷಗಳಿಂದ ತಿಳಿದಿರುವುದಾಗಿ ಸಾಕ್ಷಿ ಹೇಳಿದ್ದ. ನೇಪಾಳದಲ್ಲಿ ಕೂಡ ಅನ್ಸಾರಿ ಕೋಣೆಗೆ ಭೇಟಿ ಕೊಟ್ಟಿದ್ದಾಗಿ ಅವನು ಹೇಳಿದ್ದಾಗಿ ಅಲ್ಲಿನ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ.
ನೇಪಾಳಕ್ಕೆ ತಾನು 2008ರ ಜನವರಿಯಲ್ಲಿ ಭೇಟಿ ಕೊಟ್ಟಿದ್ದಾಗ ಕಾಠ್ಮಂಡುವಿನಲ್ಲಿ ಅನ್ಸಾರಿಯನ್ನು ಭೇಟಿ ಮಾಡಿದೆ. ಅನ್ಸಾರಿ ತನ್ನನ್ನು ಅತಿಥಿಗೃಹಕ್ಕೆ ಆಹ್ವಾನಿಸಿದ್ದ. ಅಷ್ಟರಲ್ಲಿ ಸಬಾವುದ್ದೀನ್ ಕೋಣೆಗೆ ಬಂದು ಲಖ್ವಿ ನೀಡಿದ ಕೆಲಸವನ್ನು ನೀನು ಮಾಡಿದ್ದೀಯ ಎಂದು ಅನ್ಸಾರಿಯನ್ನು ಕೇಳಿದ್ದಾಗಿ ಶೇಖ್ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಝಾಕಿವುರ್ ರೆಹ್ಮಾನ್ ಲಖ್ವಿ ಲಷ್ಕರೆ ತೊಯ್ಬಾ ಮುಖ್ಯ ಕಮಾಂಡರ್ ಹಾಗೂ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟಡ್ ಪಟ್ಟಿಯಲ್ಲಿದ್ದಾನೆ.
ಇಂಟರ್‌ಪೋಲ್ ಅವನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ನೀಡಿದೆ.ಪಾಹೀಮ್ ಕೆಲವು ದಾಖಲೆಗಳನ್ನು ಸಬಾವುದ್ದೀನ್‌ಗೆ ನೀಡಿದಾಗ ಅದು ಕೈಜಾರಿ ಕೆಳಕ್ಕೆ ಬಿದ್ದು ನೆಲದ ಮೇಲೆ ಹರಡಿತೆಂದು ಶೇಖ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂಗೆ ತಿಳಿಸಿದ್ದಾನೆ. ಮುಂಬೈನ ಕೆಲವು ಸ್ಥಳಗಳ ನಕ್ಷೆಗಳ ಕೈಬರಹವನ್ನು ತಾನು ನೆಲದ ಮೇಲೆ ಹರಡಿದ್ದನ್ನು ಕಂಡಿದ್ದಾಗಿ ಸಾಕ್ಷಿ ಹೇಳಿದ್ದ. ಈಗ ಸಾಕ್ಷಿಯೇ ನಾಪತ್ತೆಯಾಗಿರುವುದು ವಿಚಾರಣೆಗೆ ತೀವ್ರ ತೊಡಕನ್ನು ಉಂಟುಮಾಡಿದೆ.