ಬಂಟ್ವಾಳದ ಎಸ್‌ವಿಎಸ್ ಕಾಲೇಜಿನಲ್ಲಿ ಬುರ್ಖಾ ವಿವಾದ ತಣ್ಣಗಾಗುತ್ತಿದ್ದಂತೆ ದೂರದ ಹೈದರಾಬಾದ್‌ನ ಕಾಲೇಜಿನಲ್ಲೂ ಬುರ್ಖಾ ಮತ್ತೆ ವಿವಾದದ ರೂಪ ಪಡೆದಿದೆ. ಮುಸ್ಲಿಂ ಧರ್ಮದವರೇ ಹೆಚ್ಚಿರುವ ಮೆಹ್ದಿಪಟ್ಟಣಂ ಎಂಬ ಪ್ರದೇಶದಲ್ಲಿರುವ ವಾಣಿ ಕಾಲೇಜಿನ ಪ್ರಾಂಶುಪಾಲ ವೈ. ಅನ್ನಪೂರ್ಣ ಅವರು ತರಗತಿಗೆ ಬುರ್ಖಾ ಧರಿಸಿ ಬರಲು ಸಾಧ್ಯವಿಲ್ಲ ಎಂದು ಕಟ್ಟಪ್ಪಣೆ ಮಾಡಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ಬೆಳಿಗ್ಗೆ ಪ್ರಾಂಶುಪಾಲರು ಬುರ್ಖಾ ಧರಿಸಿ ಕಾಲೇಜಿಗೆ ಬಂದರೆ ದಯವಿಟ್ಟು ಗೇಟಿನ ಹೊರಗೆ ನಿಲ್ಲಿ ಎಂದು ಮಾತಾಡಿರುವುದನ್ನು ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿಗಳ ಆಕ್ರೋಶ ಮೇರೆ ಮೀರಿತು. ಕಾಲೇಜಿನ ಗೇಟಿನ ಬಳಿಗೆ ಅಕ್ಕಪಕ್ಕದ ಕಾಲೇಜಿನ ಹುಡುಗರ ಗುಂಪು ಕಾಲೇಜಿನತ್ತ ಕಲ್ಲೆಸೆಯಲು ಶುರುಮಾಡಿದರು. ಇದಕ್ಕೆ ವಾಣಿ ಕಾಲೇಜಿಯ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರೂ ಕೈಜೋಡಿಸಿದರು. ನಂತರ ಕಾಲೇಜು ಆಡಳಿತ ಮಂಡಳಿ ಪೊಲೀಸರನ್ನು ಕರೆದ ಮೇಲಷ್ಟೆ ಪರಿಸ್ಥಿತಿ ಹತೋಟಿಗೆ ಬಂತು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು ಎನ್ನಲಾಗಿದೆ.
ವಾಣಿ ಕಾಲೇಜಿನಲ್ಲಿ ಗುರುವಾರವೇ ವಿದ್ಯಾರ್ಥಿಗಳು ಧರಣಿ ನಡೆಸಿ ಪ್ರತಿಭಟಿಸಿದ್ದರು. ಕಳೆದ ವಾರ ಕಾಲೇಜಿನ ಹುಡುಗಿಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಸರಿಯಾದ ಕಾಳಜಿ ವಹಿಸಿಲ್ಲ ಎಂಬುದು ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಮುಖ ಕಾರಣವಾಗಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಕಾಣೆಯಾದ ಹುಡುಗಿ ಆಕೆಯ ಪ್ರಿಯಕರನ ಜತೆಗೆ ಓಡಿಹೋಗಿದ್ದಾಳೆ ಎಂದಿತ್ತು. ಕಾಣೆಯಾದ ಹುಡುಗಿ ಗುರುವಾರ ಸಂಜೆ ಮರಳಿದ್ದಳು.
ನಂತರ ಈ ಪ್ರತಿಭಟನೆ ಪ್ರಾಂಶುಪಾಲರ ಬುರ್ಖಾ ಧೋರಣೆಯ ವಿರುದ್ಧ ತಿರುಗಿತು. ರಂಜಾನ್ ಮಾಸಾಚರಣೆಯ ಹಿನ್ನೆಲೆಯಲ್ಲಿ ಒಂದು ವಾರ ಬುರ್ಖಾ ಧರಿಸಲು ಪ್ರಾಂಶುಪಾಲರು ಅನುಮತಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಪ್ರಾಂಶುಪಾಲರ ನೀತಿಯ ವಿರುದ್ಧ ಅಪಸ್ವರವೆತ್ತಿದ್ದರು. ಅದೇ ಸಂದರ್ಭ ಶುಕ್ರವಾರ ಬೆಳಿಗ್ಗೆ ತರಗತಿಗೆ ತಡವಾಗಿ ಬಂದ ವಿದ್ಯಾರ್ಥಿನಿಯರನ್ನು ತರಗತಿಗೆ ಸೇರಿಸಲು ಒಪ್ಪದ ಪ್ರಾಂಶುಪಾಲರ ನೀತಿ ವಿದ್ಯಾರ್ಥಿಗಳನ್ನು ಇನ್ನೂ ರೊಚ್ಚಿಗೆಬ್ಬಿಸಿತು. ಹೀಗಾಗಿ ವಿದ್ಯಾರ್ಥಿಗಳು ಗೇಟಿನ ಬಳಿ ಕಾಲೇಜಿಗೆ ಕಲ್ಲೆಸೆದರು. ಸ್ಥಳೀಯ ಸುಮಾರು 300ಕ್ಕೂ ಹೆಚ್ಚು ಮಂದಿ ಇದಕ್ಕೆ ಸೇರಿಕೊಂಡರು. ಗಲಾಟೆ ವಿಕೋಪಕ್ಕೆ ಹೋಯಿತು.
ನಂತರ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಕೆಲವು ಹುಡುಗರು ಪೊಲೀಸರಿಗೇ ಕಲ್ಲೆಸೆದರೆಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅದಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರವನ್ನೇ ಮಾಡಬೇಕಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಉಪ ಆಯುಕ್ತ ಸಿ.ರವಿವರ್ಮ ಹೇಳುವಂತೆ, ಸ್ಥಳೀಯ ಯುವಕರೂ ಈ ಗಲಾಟೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಗಲಾಟೆ ತೀವ್ರವಾಯಿತು,. ಹಲವರು ಪೊಲೀಸರ ಮೇಲೂ ಕಲ್ಲೆಸೆದಿದ್ದಾರೆ. ಜತೆಗೆ, ವಾಣಿ ಕಾಲೇಜಿನ ಗೆಳೆಯರಿರುವ ಪಕ್ಕದ ನಾರಾಯಣ ಜೂನಿಯರ್ ಕಾಲೇಜು, ಗೌತಮ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಈ ಗಲಾಟೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ವಿನಯ, ನಾಚಿಕೆ ಎಂಬುದೇ ನಿಮಗಿಲ್ಲವಾದ ಮೇಲೆ ಬುರ್ಖಾ ಧರಿಸುವುದು ಯಾವ ಉದ್ದೇಶಕ್ಕಾಗಿ ಎಂಬರ್ಥದಲ್ಲಿ ಪ್ರಾಂಶುಪಾಲರು ನಮ್ಮಲ್ಲಿ ಮಾತಾಡಿದ್ದಾರೆ. ಪ್ರಾಂಶುಪಾಲರ ಈ ಧೋರಣೆಯ ಮೂತುಗಳು ನಮ್ಮನ್ನು ಘಾಸಿಗೊಳಿಸಿವೆ. ಹೀಗಾಗಿ ನಾವು ನಮ್ಮ ಹೆತ್ತವರ ಸಹಾಯವನ್ನೂ ಪಡೆದು ಕಾಲೇಜಿನಲ್ಲಿ ಗಲಾಟೆ ಮಾಡಿದೆವು ಎಂದು ವಿವರಿಸುತ್ತಾರೆ ವಿದ್ಯಾರ್ಥಿನಿ ನದೀಮಾ ರೆಹಮಾನ್.