ಬಿಜೆಪಿ ಪಕ್ಷಕ್ಕೆ ಪುನರುಜ್ಜೀವನ ನೀಡುವ ನಿಟ್ಟಿನಲ್ಲಿ ಬಿಜೆಪಿಯೊಳಗೆ ಉತ್ತರಾಧಿಕಾರದ ಕುರಿತು ಯೋಜನೆ ನಡೆಯುತ್ತಿದೆ ಎಂಬ ಊಹಾಪೋಹಗಳು ದಟ್ಟವಾಗಿದೆ. ಶುಕ್ರವಾರ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿಯೊಳಗಿನ ಬಿಕ್ಕಟ್ಟನ್ನು ಶೀಘ್ರವೇ ಪರಿಹರಿಸಿಕೊಳ್ಳಬೇಕು ಎಂಬ ಸಂದೇಶ ನೀಡಿರುವ ಬಳಿಕ ಪಕ್ಷದೊಳಗಿನ ಚಟುವಟಿಕೆಗಳು ಚುರುಕಾಗಿವೆ.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್ ಹಾಗೂ ವೆಂಕಯ್ಯನಾಯ್ಡು ಅವರುಗಳು ಭಾಗ್ವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಅವರು ಆಡ್ವಾಣಿಯವರೊಂದಿಗೆ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ್ದರು. ಆಡ್ವಾಣಿ ಅವರು ಇಂದು ಆರ್ಎಸ್ಎಸ್ ಮುಖ್ಯಸ್ಥರನ್ನು ಭೇಟಿಯಾಗಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಜಸ್ವಂತ್ ಸಿಂಗ್ ಅವರು ಆಡ್ವಾಣಿ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳನ್ನು ಹೊರಿಸುತ್ತಿರುವುದು, ಇನ್ನೋರ್ವ ಹಿರಿಯ ನಾಯಕ ಅರುಣ್ ಶೌರಿ ಅವರು ಪಕ್ಷವು ಸೂತ್ರಹರಿದ ಗಾಳಿಪಟವಾಗಿದೆ ಎಂದು ಹೇಳಿರುವುದು ಎಲ್ಲವೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆರ್ಎಸ್ಎಸ್ ಮುಖಂಡರೊಂದಿಗೆ ತಮ್ಮ ಭೇಟಿಯನ್ನು ಸೌಹಾರ್ದ ಭೇಟಿ ಎಂಬುದಾಗಿ ಬಿಜೆಪಿ ನಾಯಕರು ಬಣ್ಣಿಸಿದ್ದರೂ, ಎರಡು ಲೋಕಸಭಾ ಚುನಾವಣೆಯಲ್ಲಿ ಸತತ ಸೋಲು ಅನುಭವಿಸಿರುವ ಪಕ್ಷದ ಪುನರುತ್ಥಾನಕ್ಕಾಗಿ ಉತ್ತರಾಧಿಕಾರದ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. ಅದಾಗ್ಯೂ, ಜಸ್ವಂತ್ ಸಿಂಗ್ ಅವರು ಆಡ್ವಾಣಿ ವಿರುದ್ಧ ಮಾಡಿರುವ ಆಪಾದನೆಗಳಿಗೆಲ್ಲ ಅವರು ಪ್ರತಿಕ್ರಿಯೆ ನೀಡಿಲ್ಲ.
ಕಾಂದಹಾರ್ ವಿಮಾನ ಅಪಹರಣ ಸಂದರ್ಭದಲ್ಲಿ ಜಸ್ವಂತ್ ಸಿಂಗ್ ಕಾಂಧಹಾರ್‌ಗೆ ಉಗ್ರರೊಂದಿಗೆ ತೆರಳುವುದು ಆಡ್ವಾಣಿಯವರಿಗೆ ತಿಳಿದಿತ್ತು ಎಂಬುದಾಗಿ ಜಸ್ವಂತ್ ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಆಗಿನ ರಾಷ್ಟ್ರೀಯ ಭದ್ರತಾ ಸಲಹಾಗಾರರಾಗಿದ್ದ ಬ್ರಿಜೇಶ್ ಮಿಶ್ರಾ ಆಡ್ವಾಣಿಗೆ ಎಲ್ಲವೂ ತಿಳಿದಿತ್ತು ಎಂದಿದ್ದರು. ಆಗಿನ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅವರೂ ಸಹ ಈ ಕುರಿತು ನಡೆದಿದ್ದ ಸಂಪುಟ ಸಭೆಯಲ್ಲಿ ಆಡ್ವಾಣಿ ಭಾಗವಹಿಸಿದ್ದು ಅವರಿಗೆ ಎಲ್ಲಾ ತಿಳಿದಿತ್ತು ಎಂದಿದ್ದಾರೆ.
ಇದಲ್ಲದೆ, ಆಡ್ವಾಣಿ ಅವರು ಪ್ರಧಾನಿಯಾಗುವ ಏಕೈಕ ಉದ್ದೇಶದಿಂದ ತಪ್ಪುನಿರ್ಧಾರಗಳನ್ನೇ ಕೈಗೊಂಡಿದ್ದು, ಲೋಕಸಭೆಯಲ್ಲಿ ವೋಟಿಗಾಗಿ ನೋಟುಹಗರಣದಲ್ಲಿ ನೋಟಿನ ಕಂತೆಗಳನ್ನು ಪ್ರದರ್ಶನ ಮಾಡಿದ್ದಾಗ ಅವರು ತಡೆದಿರಲಿಲ್ಲ. ಅವರಿಗೆ ಈ ಕುರಿತು ಎಲ್ಲವೂ ತಿಳಿದಿದ್ದು, ಈ ಹಗರಣದ ಸೂತ್ರದಾರಿಯೇ ಅವರಾಗಿದ್ದರು ಎಂದು ಆಪಾದಿಸಿದ್ದಾರೆ.
ಅರುಣ್ ಜೇಟ್ಲಿಗೆ ಪಟ್ಟ? ಈ ಮಧ್ಯೆ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರ ಸ್ಥಾನ ತೆರವು ಬಹುತೇಕ ಖಚಿತವಾಗಿದ್ದು, ಇವರ ಪಟ್ಟವನ್ನು ಅರುಣ್ ಜೇಟ್ಲಿ ವಹಿಸಲಿದ್ದಾರೆ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕರ ಸ್ಥಾನವನ್ನು ಪ್ರಸಕ್ತ ಲೋಕಸಭೆಯಲ್ಲಿ ಉಪನಾಯಕಿಯಾಗಿರುವ ಸುಷ್ಮಾ ಸ್ವರಾಜ್ ವಹಿಸಲಿದ್ದಾರೆ ಎಂಬ ಉಹಾಪೋಹಗಳು ದಟ್ಟವಾಗಿವೆ.