ಟ್ಯೂಶನ್ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಮೂರನೆ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಮೇಲುಡುಪು ಕಳಚಿಸಿ ಶಿಕ್ಷಕಿಯೊಬ್ಬಳು ಮೆರವಣೆಗೆ ನಡೆಸಿದ ಆತಂಕಕಾರಿ ಘಟನೆ ಶುಕ್ರವಾರ ನಡೆದಿರುವುದಾಗಿ ವರದಿಯಾಗಿದೆ. ಈ ಬಲಿಪಶು ಹುಡುಗಿ ಸಂಪೂರ್ಣ ಶುಲ್ಕವಿನಾಯಿತಿಗೆ ಅರ್ಹಳಾಗಿದ್ದರೂ ಆಕೆಯನ್ನು ಉಳಿದ ವಿದ್ಯಾರ್ಥಿಗಳು 'ಶೇಮ್, ಶೇಮ್...' ಎಂದು ಕೂಗುತ್ತಿರುವಂತೆ ತರಗತಿಯಿಂದ ತರಗತಿಗೆ ಅಲೆಯುವಂತೆ ಮಾಡಲಾಯಿತು ಎಂದು ಆಪಾದಿಸಲಾಗಿದೆ.
ಫರಿದಾಬಾದ್ ಮಾದರಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಒಂಬತ್ತರ ಹರೆಯದ ಬಾಲಕಿಯು ರಿಕ್ಷಾಚಾಲಕನೊಬ್ಬನ ಪುತ್ರಿಯಾಗಿದ್ದು ಆವಕಾಶ ವಂಚಿತ ಮಕ್ಕಳಿಗಾಗಿ ಇರುವ ಯೋಜನೆಯಡಿಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಶುಲ್ಕ ವಿನಾಯಿತಿ ಪಡೆದಿದ್ದಳು. ಈಕೆ ತಾನು ಶಾಲಾ ಶುಲ್ಕ ಸಲ್ಲಿಸಿಲ್ಲ ಎಂಬುದಾಗಿ ಶಿಕ್ಷಕಿಗೆ ತಿಳಿಸಿದ್ದಳು.
ಇದನ್ನು ಕೇಳಿದ ಶಿಕ್ಷಕಿ ಬಾಲಕಿಯ ಟಿಶರ್ಟ್ ತೆಗೆದು ಹಾಕಿ ಆಕೆಯ ಸ್ಕರ್ಟನ್ನು ತೆಗೆಯಲು ಪ್ರಯತ್ನಿಸಿದ್ದಳು. "ಶಿಕ್ಷಕಿಯು ಬಾಲಕಿಯ ಸ್ಕರ್ಟ್ ಜಾರಿಸಲು ವಿಫಲವಾದಾಗ ತನ್ನ ಪುತ್ರಿಯನ್ನು ಎಲ್ಲಾ ತರಗತಿ ಕೊಠಡಿಗೆ ಕರೆದೊಯ್ದಿದ್ದು, ಎಲ್ಲಾ ಮಕ್ಕಳು ಶೇಮ್, ಶೇಮ್ ಎಂದು ಕೂಗುವಂತೆ ಪ್ರಚೋದಿಸಿದ್ದರು" ಎಂದು ಬಾಲಕಿಯ ತಾಯಿ ದೂರಿದ್ದಾರೆ. ತನ್ನ ಮಗಳು ಶಾಲೆಯಿಂದ ಮನೆಗೆ ಮರಳಿ ಬಂದಾಗಷ್ಟೆ ತನಗೆ ಈ ವಿಚಾರ ತಿಳಿಯಿತು ಎಂದು ಆಕೆ ಹೇಳಿದ್ದಾರೆ.
ಈ ಘಟನೆಯು ಶಾಲಾಶುಲ್ಕಕ್ಕೆ ಸಂಬಂಧಿಸಿದ್ದು ಎಂಬುದನ್ನು ಶಾಲ ಪ್ರಾಂಶುಪಾಲ ಎಚ್.ಎಸ್. ಮಲಿಕ್ ನಿರಾಕರಿಸಿದ್ದಾರದರೂ, ತಪ್ಪಿತಸ್ಥ ಶಿಕ್ಷಕಿಯನ್ನು ಅಮಾನತ್ತುಗೊಳಿಸಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಕುರಿತು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿರುವುದಾಗಿ ಪೊಲೀಸ್ ಆಯುಕ್ತ ಪಿ.ಕೆ. ಅಗರ್ವಾಲ್ ಹೇಳಿದ್ದಾರೆ.
ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂಬುದಾಗಿ ಫರಿದಾಬಾದ್ ಜಿಲ್ಲಾ ಶೈಕ್ಷಣಿಕ ಅಧಿಕಾರಿ ಕೆ. ಬಾಲಾ ಹೇಳಿದ್ದಾರೆ. ಆದರೆ ಈ ಕುರಿತು ಕ್ಷಿಪ್ರ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರಕರಣದ ಕುರಿತಂತೆ ಬಾಲಕಿಯ ಹೆತ್ತವರು ಜಿಲ್ಲಾ ಆಡಳಿವನ್ನು ಸಂಪರ್ಕಿಸಿರುವುದು ಶಾಲಾ ಆಡಳಿತದ ಕಣ್ಣನ್ನು ಮತ್ತುಷ್ಟು ಕೆಂಪಾಗಿಸಿದೆ.
ಈ ಮಧ್ಯೆ, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಶುಲ್ಕ ಸಂಬಂಧೀ ಸೂಚನೆಗಳನ್ನು ಅಳವಡಿಸಲು ಸರ್ಕಾರ ವಿಫಲವಾಗಿದೆ ಎಂಬುದಾಗಿ ಫರಿದಾಬಾದ್ ಹೆತ್ತವರ ಸಂಘಟನೆಯ ಅಧ್ಯಕ್ಷರಾಗಿರುವ ಎನ್.ಎಲ್. ಜಂಗಿಡ್ ಅವರು ದೂರಿದ್ದಾರೆ.
ಶಾಲಾ ಮಾಲಕನಿಂದಲೇ ಅತ್ಯಾಚಾರ ಜೈಪುರದ ಶಾಲೆಯಲ್ಲಿ ನಡೆದಿರುವ ಮತ್ತೊಂದು ಘಟನೆಯಲ್ಲಿ ಶಾಲಾ ಮಾಲಕನೇ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮಹಾರಾಜ ಪ್ರೌಢಶಾಲೆಯ ಮಾಲಕ ರಮೇಶ್ ಸೈನ್ ಎಂಬಾತ ಆರನೆ ತರಗತಿ ವಿದ್ಯಾರ್ಥಿನಿ 14ರ ಹರೆಯದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಕಚೇರಿಯಲ್ಲೇ ಈ ದುಷ್ಕೃತ್ಯ ಎಸಗಿರುವುದಾಗಿ ಡಿಎಸ್‌ಪಿ(ಉತ್ತರ) ಅನಿಲ್ ಗೊತ್ವಾಲ್ ಶುಕ್ರವಾರ ತಿಳಿಸಿದ್ದಾರೆ.