ಬಿಜೆಪಿಯೊಳಗಿನ ಆಂತರಿಕ ಬಿಕ್ಕಚ್ಚು 'ಒಳ್ಳೆಯದಲ್ಲ' ಮತ್ತು ಪಕ್ಷಗಳೊಳಗೆ ಸ್ಥಿರತೆ ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಅಲ್ಲದೆ, ಕಾಂಧಹಾರ್ ಮತ್ತು ಪೋಕ್ರಾನ್‌ನಂತಹ ವಿಚಾರಗಳನ್ನು ಈಗ ಕೆದಕುವುದು ಅನವಶ್ಯಕ ಎಂದೂ ಅವರು ಅಭಿಪ್ರಾಯಿಸಿದ್ದಾರೆ.
"ಬಿಜೆಪಿಯೊಳಗಿನ ಆಂತರಿಕ ಕಲಹ ಒಳ್ಳೆಯದಲ್ಲ. ಪಕ್ಷಗಳೊಳಗಿನ ಸ್ಥಿರತೆ ಅವಶ್ಯಕ. ಪಕ್ಷದೊಳಗೆ ಸ್ಥಿರತೆ ಇಲ್ಲವೆಂದಾದರೆ, ಅದು ರಾಷ್ಟ್ರದ ಮೇಲೆ ಪರಿಣಾಮ ಬೀರಲಿದೆ" ಎಂದು ಅವರು ಬಿಜೆಪಿಯೊಳಗಿನ ಬಿಕ್ಕಟ್ಟು ಕುರಿತು ಪ್ರಥಮವಾಗಿ ಪ್ರತಿಕ್ರಿಯಿಸಿದ್ದಾರೆ.
ಬಾರ್ಮಾರ್‌ನಿಂದ 60 ಕಿಲೋಮೀಟರ್ ದೂರದಲ್ಲಿರುವ ರಾಮಸರ್ ಎಂಬಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಇಲ್ಲಿಗೆ ಆಗಮಿಸಿರುವ ಅವರೊಂದಿಗೆ, ಬಿಜೆಪಿಯೊಳಗೆ ಅಸ್ಥಿರತೆ ಇದೆಯೇ ಎಂಬುದಾಗಿ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಅವರು, ಎಲ್ಲ ಪಕ್ಷಗಳೊಳಗೂ ಸ್ಥಿರತೆ ಇರಬೇಕು ಎಂದು ನುಡಿದರು.
ಕಾಂಧಹಾರ್ ವಿಚಾರದ ಕುರಿತು ಕೇಳಿದಾಗ "ಈ ಕುರಿತು ನಾನೇನು ಹೇಳಲು ಸಾಧ್ಯ. ನಾನು ಅಲ್ಲಿರಲಿಲ್ಲ" ಎಂದು ನುಡಿದರು. ಆದರೂ ಬಿಜೆಪಿಯೊಳಗೆ ನಡೆಯುತ್ತಿರುವುದು ಸರಿಯಲ್ಲ ಎಂದು ನುಡಿದರು.
ಕಾಂಧಹಾರ್ ವಿಮಾನ ಅಪಹರಣ ಸಂದರ್ಭದಲ್ಲಿ ಜಸ್ವಂತ್ ಸಿಂಗ್ ಅವರನ್ನು ಕಾಂಧಹಾರ್‌ಗೆ ಕಳುಹಿಸುವ ನಿರ್ಧಾಕ ಕೈಗೊಂಡಿರುವ ಸಭೆಯಲ್ಲಿ ಆಡ್ವಾಣಿ ಹಾಜರಿದ್ದರು ಎಂಬುದಾಗಿ ಬಿಜೆಪಿ ನಾಯಕರು ಹೇಳುತ್ತಿರುವ ಕುರಿತು ಕೇಳಿದ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಅಲ್ಲಿ ಇರಲಿಲ್ಲ. ಯಶ್ವಂತ್ ಮತ್ತು ಜಸ್ವಂತ್" ಅಲ್ಲಿದ್ದರು ಎಂದು ನುಡಿದರು.