1984ರ ಸಿಖ್ ವಿರೋಧಿ ಹಿಂಸಾಚಾರದಲ್ಲಿ ಸಿಖ್ ಕುಟುಂಬವೊಂದರ ಹತ್ಯೆಗೆ ಯತ್ನಿಸಿದ ಮೂವರಿಗೆ ದೆಹಲಿ ಕೋರ್ಟೊಂದು ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು ಅಪರಾಧದಲ್ಲಿ ಭಾಗಿಯಾದ ಅವರಿಗೆ 6.20 ಲಕ್ಷ ರೂ. ದಂಡವನ್ನು ಹೇರಿದೆ.
ಉತ್ತರ ದೆಹಲಿಯ ಶಾಸ್ತ್ರಿನಗರದಲ್ಲಿ ಗಲಭೆ, ಡಕಾಯಿತಿ ಮತ್ತು ಹತ್ಯೆಯತ್ನ ನಡೆಸಿದ ಆರೋಪದಲ್ಲಿ ಮಂಗಲ್ ಸಿಂಗ್ ಅಲಿಯಾಸ್ ಬಿಲ್ಲಾ, ಬ್ರಿಜ್ ಮೋಹನ್ ವರ್ಮಾ ಮತ್ತು ಭಗತ್ ಸಿಂಗ್ ಅವರು ತಪ್ಪಿತಸ್ಥರೆಂದು ಹೆಚ್ಚುವರಿ ನ್ಯಾಯಾಧೀಶ ಎಸ್.ಎಸ್. ರಥಿ ತೀರ್ಪುನೀಡಿದ್ದರು. ಸಿಖ್ ವಿರೋಧಿ ಗಲಭೆಗಳಲ್ಲಿ ರಾಜ್ಯದ ಯಂತ್ರಾಂಗ ಮತ್ತು ದೆಹಲಿ ಪೊಲೀಸರು ವರ್ತಿಸಿದ ರೀತಿಯ ಬಗ್ಗೆ ನ್ಯಾಯಾಧೀಶರು ಕಟುವಾಗಿ ಟೀಕಿಸಿ, ಕಿಕ್ಕಿರಿದ ಕೋರ್ಟ್‌ನಲ್ಲಿ ಶಿಕ್ಷೆಯ ಸ್ವರೂಪವನ್ನು ಪ್ರಕಟಿಸಿದರು. ಶಿಕ್ಷೆಯ ಆದೇಶವನ್ನು ಜಡ್ಜ್ ನೀಡಿದ ಕೂಡಲೇ ಕೋರ್ಟ್‌ನಲ್ಲಿ ಗಲಭೆಯ ಬಲಿಪಶುಗಳ ಮತ್ತು ಕೈದಿಗಳ ಬಂಧುಗಳಿಗೆ ದುಃಖ ಉಮ್ಮಳಿಸಿತು.
ವಾದವಿವಾದದ ಸಂದರ್ಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್ ಕೈದಿಗಳಿಗೆ ಜೀವಾವಧಿ ಸಜೆಯ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಕೋರಿದರು. 1984 ನವೆಂಬರ್ ಒಂದರಂದು ಆರೋಪಿಗಳ ನೇತೃತ್ವದ ಗುಂಪು ಮನೆಯೊಂದಕ್ಕೆ ಬೆಂಕಿಹಚ್ಚಿದಾಗ ಜೋಗಿಂದರ್ ಸಿಂಗ್ ಮತ್ತು ಅವರ ಮಕ್ಕಳಾದ ಜಗಮೋಹನ್ ಸಿಂಗ್ ಮತ್ತು ಗುರ್ವೀಂದರ್ ಸಿಂಗ್ ತೀವ್ರ ಗಾಯಗೊಂಡಿದ್ದರು.
ದೆಹಲಿ ಪೊಲೀಸ್ ಗಲಭೆ ವಿರೋಧಿ ಘಟಕವು ಈ ಘಟನೆಯ ತನಿಖೆ ನಡೆಸಿತ್ತು. ಜೋಗಿಂದರ್ ಸಿಂಗ್ ಸಲ್ಲಿಸಿದ ಅಫಿಡಾವಿಟ್ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗದ ಶಿಫಾರಸಿನ ಮೇಲೆ ಪೊಲೀಸರು ಪ್ರಕರಣದ ಮರುತನಿಖೆ ನಡೆಸಿದರು.