ದೇಶದೆಲ್ಲೆಡೆ ಕೋಮು ಹಿಂಸಾಚಾರಗಳು ಸಂಭವಿಸುತ್ತಿರುವ ನಡುವೆ, ನೆರೆಮನೆಯ ಮುಸ್ಲಿಂಬಾಂಧವರು ಹಿಂದು ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯನ್ನು ನಡೆಸುವ ಮೂಲಕ ಕೋಮುಸಾಮರಸ್ಯಕ್ಕೆ ಆದರ್ಶಪ್ರಾಯರಾಗಿದ್ದಾರೆ. 1990ರ ದಶಕದಲ್ಲಿ ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ ಉಗ್ರವಾದ ತುತ್ತತುದಿ ತಲುಪಿದಾಗ ಉಗ್ರಗಾಮಿಗಳ ಹಿಂಸಾಚಾರಕ್ಕೆ ನಲುಗಿದ ಹಿಂದೂ ಪಂಡಿತರ ಬಹುತೇಕ ಕುಟುಂಬಗಳು ಕಾಶ್ಮೀರದಿಂದ ವಲಸೆ ಹೋದವು.
ಆ ಸಂದರ್ಭದಲ್ಲಿ ಏನಾದರೂ ಆಗಲಿ ಎಂದು ದೃಢಸಂಕಲ್ಪದಿಂದ ಹಿಂದು ಜನಾಂಗಕ್ಕೆ ಸೇರಿದ ಭೋಲಾ ನಾಥ್ ಕಾಚ್ರೂ ಎಂಬ ವ್ಯಕ್ತಿ ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ಶ್ರೀನಗರದಲ್ಲಿ ವಾಸಿಸುತ್ತಿದ್ದು, ಅವನು ಶುಕ್ರವಾರ ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟ. ಆದರೆ ಅವನ ಅಂತ್ಯಕ್ರಿಯೆ ನೆರವೇರಿಸಲು ಸಮೀಪದಲ್ಲಿ ಹಿಂದು ಪಂಡಿತರ ಕುಟುಂಬ ಯಾವುದೂ ಇರಲಿಲ್ಲವೆಂದು ಹೇಳಲಾಗಿದೆ. ಕಾಚ್ರೂ ವೃದ್ಧಾಪ್ಯದ ದೆಸೆಯಿಂದ ಸತ್ತಾಗ, ಆ ಪ್ರದೇಶದ ಮುಸ್ಲಿಮರು ಹಿಂದು ಕುಟುಂಬಕ್ಕೆ ಕಾಚ್ರೂ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಹಾಯ ಮಾಡಿದರು.
ಅಂತ್ಯಕ್ರಿಯೆಯಲ್ಲಿ ಸೇರಿದ್ದ ಸ್ನೇಹಿತರಿಗೆ ಮತ್ತು ಸಂಬಂಧಿಗಳಿಗೆ ಟೆಂಟ್‌ಗಳನ್ನು ಮುಸ್ಲಿಮರು ಕಟ್ಟಿದರಲ್ಲದೇ ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆಯನ್ನು ಸುಸೂತ್ರವಾಗಿ ಮಾಡಿದರು.ಅಂತ್ಯಕ್ರಿಯೆ ನೆರವೇರಿಸಲು ಯಾರೂ ಇರಲಿಲ್ಲ. ನಮ್ಮ ನೆರೆಯ ಹಿರಿಯ ವ್ಯಕ್ತಿ ಸತ್ತಾಗ ನಾವೂ ಕೂಡ ದುಃಖಿತರಾದೆವು. ನಾವು ಯಾವುದೇ ಧರ್ಮಕ್ಕೆ ಸೇರಿದ್ದರೂ ಅಂತ್ಯಕ್ರಿಯೆ ನೆರವೇರಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದಾಗಿ ಮುಸ್ಲಿಂ ಅಭಿವೃದ್ಧಿ ಸೊಸೈಟಿಯ ಗುಲಾಂ ಮೊಹಮದ್ ಭಟ್ ತಿಳಿಸಿದರು.
ನಾವು ಮಾನವೀಯತೆಯ ದೃಷ್ಟಿಯಿಂದ ಶೋಕತಪ್ತ ನೆರೆಯ ಕುಟುಂಬಕ್ಕೆ ನೆರವಾದೆವು. ಇತರೆ ಪಂಡಿತರು ವಲಸೆ ಹೋದಾಗ ಅವರು ಮನೆ ಬಿಟ್ಟು ಹೋಗಿರಲಿಲ್ಲ. ನಾವು ಈ ಕುಟುಂಬಕ್ಕೆ ಋಣಿಯಾಗಿದ್ದೇವೆ ಎಂದು ಇನ್ನೊಬ್ಬ ನೆರೆಮನೆಯ ಅಲಿ ಮೊಹಮದ್ ತಿಳಿಸಿದ್ದಾರೆ.