ಆಡ್ವಾಣಿ, ರಾಜ್‌ನಾಥ್ ತಮ್ಮ ಪಾತ್ರವನ್ನು ನಿರ್ಧರಿಸುತ್ತಾರೆ: ಆರೆಸ್ಸೆಸ್
ಹರಿದ್ವಾರ, ಸೋಮವಾರ, 31 ಆಗಸ್ಟ್ 2009( 13:24 IST )
ಪಕ್ಷದೊಳಗೆ ತಮ್ಮ ಪಾತ್ರದ ಬಗ್ಗೆ ಬಿಜೆಪಿ ನಾಯಕರಾದ ಎಲ್.ಕೆ. ಆಡ್ವಾಣಿ ಮತ್ತು ರಾಜ್‌ನಾಥ್ ಸಿಂಗ್ ನಿರ್ಧರಿಸಲಿದ್ದಾರೆ ಎಂದು ಆರ್ಎಸ್ಎಸ್ ಅಧ್ಯಕ್ಷ ಮೋಹನ್ ಭಾಗ್ವತ್ ಹೇಳಿದ್ದಾರೆ.
"ರಾಜ್‌ನಾಥ್‌ಜಿ, ಆಡ್ವಾಣಿಜಿ ಹಾಗೂ ಇತರರು ತಮ್ಮ ಪಾತ್ರದ ಬಗ್ಗೆ ನಿರ್ಧರಿಸಲಿದ್ದಾರೆ. ಭವಿಷ್ಯದಲ್ಲಿ ಬಿಜೆಪಿಯೊಳಗೆ ಎಲ್ಲವೂ ಸರಿ ಹೋಗಲಿದೆ" ಎಂಬುದಾಗಿ ಅವರಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
"ಆಡ್ವಾಣಿಯವರಂತಹ ನೈತಿಕ ನಿಲುವಿನ ವ್ಯಕ್ತಿಗಳು ಪಕ್ಷದಲ್ಲಿದ್ದಾರೆ ಮತ್ತು ಅವರ ನಿರ್ದೇಶನದನ್ವಯ ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ. ಇದರಲ್ಲಿ ನಾವೇನು ಮಾಡುವಂತಿಲ್ಲ. ಮತ್ತು ನಾವೇನು ಹೇಳಬೇಕಿಂದಿದ್ದೆವೋ ಅದನ್ನು ಹೇಳಿದ್ದೇವೆ" ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
ರಾಜ್‌ನಾಥ್ ಸಿಂಗ್ ಅವರು ಇನ್ನೊಂದು ಅವಧಿಗೆ ಮುಂದುವರಿಯುವುದಿಲ್ಲ ಎಂಬುದಾಗಿ ಭಾನುವಾರ ಸ್ಪಷ್ಟಪಡಿಸಿರುವ ಬೆನ್ನಿಗೆ ಆಡ್ವಾಣಿ ಅವರೂ ತಮ್ಮ ಪ್ರತಿಪಕ್ಷ ಸ್ಥಾನ ತೊರೆಯಲಿದ್ದಾರೆ ಎಂಬುದಾಗಿಯೂ ಹೇಳಲಾಗುತ್ತಿದ್ದು, ಆದರೆ ಯಾವಾಗ ಅವರ ಪದತ್ಯಾಗ ಮಾಡಲಿದ್ದಾರೆ ಎಂಬುದು ಅವರಿಗೆ ಬಿಟ್ಟವಿಚಾರ ಎನ್ನಲಾಗಿದೆ.
ಭಾಗ್ವತ್ ಅವರು ಪಕ್ಷದ ಭವಿಷ್ಯದ ಕ್ರಮಗಳ ಕುರಿತು ಪಕ್ಷದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಇಲ್ಲಿಗೆ ಆಗಮಿಸಿದ್ದಾರೆ. ಭಾಗ್ವತ್ ಅವರು ಆಡ್ವಾಣಿಯವರೊಂದಿಗೆ ಭಾನುವಾರ ಮುಂಜಾನೆಯ ಉಪಾಹಾರ ಮಾತುಕತೆ ನಡೆಸಿದ್ದು ಚರ್ಚೆ ನಡೆಸಿದ್ದಾರೆ. ಅವರು ಇತರ ಹಿರಿಯ ನಾಯಕೊಂದಿಗೂ ಮಾತುಕತೆ ನಡೆಸಿದ್ದಾರೆ.
ಬಿಜೆಪಿಯ ಬಂಡುಕೋರ ನಾಯಕರ ಆಂತರಿಕ ಕಚ್ಚಾಟವನ್ನು ನಿಲ್ಲಿಸುವಂತೆ ಆರ್ಎಸ್ಎಸ್ ತಾಕೀತು ಮಾಡಿದೆ. ಬಿಜೆಪಿಯೊಳಗಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರುವ ಆರ್ಎಸ್ಎಸ್ ಬಂಡುಕೋರ ನಾಯಕರಿಂದ ಬದ್ಧತೆಯನ್ನು ಪಡೆದಿದೆ.