ಭಾರತೀಯ ಜನತಾ ಪಕ್ಷದಿಂದ ಉಚ್ಚಾಟನೆಗೊಂಡಿರುವ ಜಸ್ವಂತ್ ಸಿಂಗ್ ಅವರು ಸಾರ್ವಜನಿಕ ಲೆಕ್ಕ ಸಮಿತಿ(ಪಿಎಸಿ)ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಪಕ್ಷವು ಸೂಚಿಸಿದೆ.
ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಜಸ್ವಂತ್ ಸಿಂಗ್‌ರನ್ನು ಸೋಮವಾರ ಭೇಟಿ ಮಾಡಿದ್ದು, ಪಿಎಸಿ ಮುಖ್ಯಸ್ಥರಾಗಿ ಮುಂದುವರಿಯುವ ಕುರಿತು ಬಿಜೆಪಿಯ ಅಭಿಪ್ರಾಯ ತಿಳಿಸಿದ್ದಾರೆ. ಜಸ್ವಂತ್ ಸಿಂಗ್ ಅವರನ್ನು ಕೇವಲ ಒಂದು ತಿಂಗಳ ಹಿಂದೆ ಬಿಜೆಪಿ ವತಿಯಿಂದ ಸಮತಿಗೆ ನೇಮಿಸಲಾಗಿತ್ತು.
ಜಸ್ವಂತ್ ಸಿಂಗ್ ಸ್ಥಾನ ತೆರವು ಮಾಡಿದ ಬಳಿಕವಷ್ಟೆ ಬಿಜೆಪಿಯು ಈ ಸ್ಥಾನಕ್ಕೆ ಇತರರನ್ನು ನೇಮಿಸಬಹುದಾಗಿದೆ. ಜಸ್ವಂತ್ ಸಿಂಗ್ ಅವರು ಬಿಜೆಪಿಯಲ್ಲಿದ್ದಾಗ ಅವರನ್ನು ಪಿಎಸಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಅವರೀಗ ಬಿಜೆಪಿಯೊಂದಿಗೆ ಇಲ್ಲದ ಕಾರಣ ಅವರು ಸ್ಥಾನ ತೆರವು ಮಾಡಬೇಕು ಎಂಬುದು ಪಕ್ಷದ ಅಭಿಪ್ರಾಯವಾಗಿದೆ.
ಸಾರ್ವಜನಿಕ ಲೆಕ್ಕ ಸಮಿತಿಯಲ್ಲಿ 22 ಮಂದಿ ಸದಸ್ಯರು ಇರುತ್ತಾರೆ. ಇದನ್ನು ಸಂಸತ್ತು ಪ್ರತಿವರ್ಷ ನೇಮಿಸುತ್ತದೆ. ಭಾರತ ಸರ್ಕಾರದ ವೆಚ್ಚಕ್ಕಾಗಿ ಸಂಸತ್ತು ಮಂಜೂರು ಮಾಡುವ ಮೊತ್ತದ ಲೆಕ್ಕದ ಪರಿಶೀಲನೆಗಾಗಿ ನೇಮಿಸಲಾಗುತ್ತದೆ. ಈ ಸಮಿತಿಗೆ ಭಾರತದ ಸರ್ಕಾದ ವಾರ್ಷಿಕ ಲೆಕ್ಕ ಪರಿಶೀಲನೆ ಮಾಡುವ ಅಧಿಕಾರವೂ ಇದೆ.
ಜಸ್ವಂತ್ ಅವರ ಉಚ್ಚಾಟನೆಯ ಬಳಿಕ ಬಿಜೆಪಿ ನಾಯಕರೊಬ್ಬರು ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಾಗಿದೆ. ಭೇಟಿಯ ವೇಳೆಗೆ ಸುಷ್ಮಾರೊಂದಿಗೆ ಎಸ್.ಎಸ್. ಅಹ್ಲುವಾಲಿಯ ಇದ್ದರು. ತಮ್ಮ ಇತ್ತೀಚೆಗೆ ಬಿಡುಗಡೆಗೊಂಡ ಪುಸ್ತಕದಲ್ಲಿ ಜಿನ್ನಾರನ್ನು ಹೊಗಳಿರುವುದಕ್ಕೆ ಜಸ್ವಂತ್ ಸಿಂಗ್‌ರನ್ನು ಬಿಜೆಪಿಯ ಚಿಂತನ ಬೈಠಕ್‌ನಲ್ಲಿ ಕೈಗೊಂಡಿರುವ ನಿರ್ಧಾರದಂತೆ ಉಚ್ಚಾಟಿಸಲಾಗಿದೆ.