ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಹರ್ಯಾಣಗಳಲ್ಲಿ ಅಕ್ಟೋಬರ್ 13ರಂದು ಚುನಾವಣೆ (Maharashtra | Arunachal | Haryana | state elections)
ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಹರ್ಯಾಣಗಳಲ್ಲಿ ಅಕ್ಟೋಬರ್ 13ರಂದು ಚುನಾವಣೆ
ನವದೆಹಲಿ, ಸೋಮವಾರ, 31 ಆಗಸ್ಟ್ 2009( 20:37 IST )
ಮಹಾರಾಷ್ಟ್ರ, ಅರುಣಾಚಲ ಪ್ರದೇಶ ಹಾಗೂ ಹರ್ಯಾಣಗಳಲ್ಲಿ ಅಕ್ಟೋಬರ್ 13ರಂದು ವಿಧಾನ ಸಭೆ ಚುನಾವಣೆಗಳು ನಡೆಯಲಿದೆ ಎಂಬುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ಸೆಪ್ಟೆಂಬರ್ 18ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ 25 ನಾಮಪತ್ರ ಹಿಂತೆಗೆಯಲು ಕೊನೆಯ ದಿನಾಂಕವಾಗಿದೆ ಎಂಬುದಾಗಿ ಮುಖ್ಯಚುನಾವಣಾ ಆಯುಕ್ತ ನವೀನ್ ಚಾವ್ಲಾ ಹೇಳಿದ್ದಾರೆ. ಅಕ್ಟೋಬರ್ 22ರಂದು ಮತ ಎಣಿಕೆ ನಡೆಯಲಿದೆ.
ಮುಖ್ಯ ಚುನಾವಣಾ ಆಯುಕ್ತರೊಂದಿಗೆ ಇತರ ಇಬ್ಬರು ಆಯುಕ್ತರಾದ ಎಸ್.ವೈ. ಖುರೇಶಿ ಮತ್ತು ವಿ.ಎಸ್. ಸಂಪತ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು ಏಳೂವರೆ ಕೋಟಿ ಮತದಾರರಿದ್ದು, 82,028 ಮತಗಟ್ಟೆಗಳ ಮೂಲಕ ಮತ ಚಲಾಯಿಸಲಿದ್ದಾರೆ. ಒಟ್ಟು 288 ವಿಧಾನ ಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಹರ್ಯಾಣ ಇಲ್ಲಿ ವಿಧಾಸಭೆಯ ಅವಧಿಯು ಮುಗಿಯುವ ಆರು ತಿಂಗಳ ಮುಂಚಿತವಾಗಿ ಆಗಸ್ಟ್ 21ರಂದು ವಿಸರ್ಜಿಸಲಾಗಿದೆ. ಹರ್ಯಾಣ ವಿಧಾನ ಸಭೆಯಲ್ಲಿ 90 ಸ್ಥಾನಗಳಿದ್ದು, 13 ಸಾವಿರ ಮತಗಟ್ಟೆಗಳಲ್ಲಿ ಸುಮಾರು 1.20 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಅರುಣಾಚಲ ಪ್ರದೇಶ ಇಲ್ಲಿ 90 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 2,061 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಮತಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ಚರ್ಚೆಗಳು ನಡೆಯುತ್ತಿದ್ದರೂ, ಎಲ್ಲಾ ಮೂರು ರಾಜ್ಯಗಳಲ್ಲೂ ಮತಯಂತ್ರವನ್ನೇ ಬಳಸಲಾಗುವುದು ಎಂದು ಆಯೋಗ ತಿಳಿಸಿದೆ. ದೈಹಿಕ ನ್ಯೂನತೆಯ ಮತದಾರರಿಗೆ ವಿಶೇಷ ವ್ಯವಸ್ಥೆ ಮಾಡುವುದಾಗಿ ಆಯುಕ್ತರು ತಿಳಿಸಿದ್ದಾರೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋ ಕ್ಯಾಮರಗಳನ್ನು ಅಳವಡಿಸಲಾಗುವುದು.
ಈ ಚುನಾವಣಾ ಘೋಷಣೆಯಿಂದಾಗಿ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಂತಾಗಿದೆ.