ಪ್ರೀತಿಯ ಹೆಸರಲ್ಲಿ ಹುಡುಗಿಯರನ್ನು ಆಕರ್ಷಿಸುತ್ತಿರುವ ಜಿಹಾದಿಗಳು?
ತಿರುವನಂತಪುರ, ಮಂಗಳವಾರ, 1 ಸೆಪ್ಟೆಂಬರ್ 2009( 12:26 IST )
ಸುಲಭವಾಗಿ ಹಳ್ಳಕ್ಕೆ ಬೀಳುವ ಹುಡುಗಿಯರನ್ನು ಪ್ರೀತಿಸಿ ಬಳಿಕ ಅವರನ್ನು ದೇಶದ್ರೋಹಿ ಕೆಲಸಗಳಿಗೆ ಬಳಸಿಕೊಳ್ಳಲು ಜಿಹಾದಿಗಳ ಸಂಘಟಿತ ಜಾಲಗಳು ಕಾರ್ಯಾಚರಿಸುತ್ತಿವೆ ಎಂಬ ಆತಂಕಕಾರಿ ವಿಚಾರ ನಡೆಯುತ್ತಿದೆ ಎನ್ನಲಾಗಿದೆ.
ಈ ವಿಚಾರದ ಕುರಿತು ತನಿಖೆ ನಡೆಸಲು ಕೇರಳ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. "ಇಂತಹುದು ಏನಾದರೂ ನಡೆಯುತ್ತಿದೆಯೇ ಎಂಬ ಕುರಿತು ತನಿಖೆ ನಡೆಸುತ್ತಿರುವುದಾಗಿ" ಡಿಜಿಪಿ ಜೇಕಬ್ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಬ್ಬರು ಎಂಬಿಎ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳು ನಾಪತ್ತೆಯಾಗಿದ್ದಾರೆಂದು ದೂರಿ ಕೇರಳ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವೇಳೆ ಹೊರಬಂದಿರುವ ವಿಚಾರವು ಪೊಲೀಸರಿಗೆ ದಿಗ್ಭ್ರಮೆ ಉಂಟು ಮಾಡಿತ್ತು. ಈ ಇಬ್ಬರು ಪಟನಂತಿಟ್ಟ ಜಿಲ್ಲೆಯ ಸೈಂಟ್ ಜೋನ್ಸ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದು, ತಮ್ಮ ಹಿರಿಯ ವಿದ್ಯಾರ್ಥಿಯೊಬ್ಬನೊಂದಿಗೆ ಆತ್ಮೀಯವಾಗಿದ್ದರು ಎಂದು ಹೇಳಲಾಗಿದೆ.
ಈ ಹುಡಗ ಕಾಲೇಜಿನ ಆಡಳಿತಕ್ಕೆ ತಲೆನೋವಾಗಿದ್ದು, ಈತನನ್ನು ಕೆಲವು ವರ್ಷಗಳ ಹಿಂದೆ ಉಚ್ಚಾಟಿಸಲಾಗಿತ್ತು. "ಈತ ನಾಲ್ವರು ಕಿರಿಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಹೊಂದಿದ್ದ. ಇವರಲ್ಲಿ ಈ ಇಬ್ಬರು ಎಂಬಿಎ ವಿದ್ಯಾರ್ಥಿನಿಯರೂ ಸೇರಿದ್ದು, ಇವರೊಂದಿಗೆ ಪ್ರೀತಿಯ ನಾಟಕವಾಡಿದ್ದ. ಈ ಹುಡುಗಿಯರನ್ನು ಇಸ್ಲಾಮಿಗೆ ಪರಿವರ್ತಿಸಲು ಆತ ಬಯಸಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ. ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಗೆ ಆತನ ಉದ್ದೇಶಗಳು ಸಂಶಯ ಮೂಡಿಸಿದ್ದರೆ, ಇನ್ನೊಬ್ಬಳಲ್ಲಿ ಮಾನಸಿಕ ಸಮಸ್ಯೆ ತಲೆದೋರಿತ್ತು. ಮತ್ತಿಬ್ಬರು ಆತನನ್ನು ಪ್ರೇಮಿಸಿ ಅವನೊಂದಿಗೆ ಪರಾರಿಯಾಗಿದ್ದರು ಎಂಬುದಾಗಿ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆನ್ನಲಾಗಿದೆ.
ಈ ಹುಡುಗಿಯರು ನಾಪತ್ತೆಯಾದಾಗ ಅವರ ಹೆತ್ತವರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಹುಡುಗಿಯರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಇವರನ್ನು ನ್ಯಾಯಾಲಯವು ಹೆತ್ತವರ ವಶಕ್ಕೊಪ್ಪಿಸಿತ್ತು. ಇವರು ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ, ತಮ್ಮನ್ನು ವ್ಯೂಹದಲ್ಲಿ ಸಿಲುಕಿಸಲಾಗಿದ್ದು, ಆತನೊಂದಿಗೆ ತೆರಳಲು ತಾವು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಹುಡುಗಿಯರು ಆತನ ವಶದಲ್ಲಿದ್ದಾಗ ಒಬ್ಬಾಕೆ ಆತನನ್ನು ವಿವಾಹವಾಗಿದ್ದರೆ, ಇನ್ನೊಬ್ಬಾಕೆಗೆ ಆತನ ಸ್ನೇಹಿತ ಬಸ್ ಕಂಡಕ್ಟರ್ ಒಬ್ಬನನ್ನು ವಿವಾಹವಾಗುವಂತೆ ಒತ್ತಾಯಿಸಲಾಗಿತ್ತು. ತಮಗೆ ಹುಡುಗ ಜಿಹಾದಿ ವಿಡಿಯೋಗಳನ್ನು ತೋರಿಸಿದ್ದ ಮತ್ತು ಜಿಹಾದಿ ಸಾಹಿತ್ಯವನ್ನು ಓದಲು ನೀಡಿದ್ದ ಎಂಬುದಾಗಿ ಹುಡುಗಿಯರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಡುಗಿಯರ ಈ ಹೇಳಿಕೆಯಿಂದ ಕಳವಳಗೊಂಡಿರುವ ಹೈಕೋರ್ಟ್ ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸರಿಗೆ ತಾಕೀತು ಮಾಡಿದೆ.
"ಈ ಹುಡುಗಿಯರು ಉಳಿದುಕೊಂಡಿದ್ದ ಹಾಸ್ಟೇಲ್ ಕೊಠಡಿಯಲ್ಲಿ ಹುಡುಕಾಟ ನಡೆಸಿದಾಗ ಆತ ನೀಡಿದ್ದ ಉದ್ರೇಕಕಾರಿ ಸಾಹಿತ್ಯಗಳು ಪತ್ತೆಯಾಗಿವೆ" ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಇದನ್ನು ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು ತಮ್ಮ ತನಿಖೆಯನ್ನು ಇತರ ಕಾಲೇಜುಗಳ ಕ್ಯಾಂಪಸ್ಸುಗಳಿಗೂ ವಿಸ್ತರಿಸಿದ್ದಾರೆ. ಇದು ಏಕೈಕ ಪ್ರಕರಣವಲ್ಲ, ಇತ್ತೀಚೆಗೆ ಇಂತಹ ಇತರ ಪ್ರಕರಣಗಳು ಕಂಡು ಬಂದಿದ್ದರೂ ಇವುಗಳನ್ನು ರಾಜಕೀಯ ಕಾರಣಕ್ಕಾಗಿ ಉಪೇಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ವರದಿ ತಿಳಿಸಿದೆ.