ಕಳೆದ ವರ್ಷ ಸಂಸತ್ತಿನಲ್ಲಿ ವಿಶ್ವಾಸಗೊತ್ತುವಳಿ ಮಂಡನೆಯಾದಾಗ ಸರ್ಕಾರದ ಪರ ಮತಹಾಕಲು ನೀಡಿರುವ ಆಮಿಷದ ಹಣ ಎಂಬುದಾಗಿ ಸಂಸತ್ತಿನಲ್ಲಿ ಬಿಜೆಪಿ ಸಂಪಸದರು ಹಣದ ಕಂತೆಗಳನ್ನು ಪ್ರದರ್ಶನ ಮಾಡಿರುವ ಪ್ರಕರಣದ ಸೂತ್ರದಾರಿ ಎಲ್.ಕೆ. ಆಡ್ವಾಣಿ ಎಂಬುದಾಗಿ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಜಸ್ವಂತ್ ಸಿಂಗ್ ಅವರು ಹೇಳಿರುವ ಹಿನ್ನೆಲೆಯಲ್ಲಿ, ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂಬುದಾಗಿ ಕಾಂಗ್ರೆಸ್ ಒತ್ತಾಯಿಸಿದೆ.
"ಕಪ್ಪುಹಣ ಒಳಗೊಂಡಿರುವ ಈ ಪ್ರಕರಣದ ಕುರಿತು ವಿಸ್ತೃತ ತನಿಖೆಯ ಅಗತ್ಯವಿದೆ" ಎಂಬುದಾಗಿ ಎಐಸಿಸಿ ವಕ್ತಾರ ಅಭಿಷೇಕ್ ಮಾನು ಸಿಂಘ್ವಿ ಹೇಳಿದ್ದಾರೆ. ಈ ಪ್ರಕರಣವು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹಣವು ಎಲ್ಲಿಂದ ಬಂತು ಮತ್ತು ಯಾರು ಇದನ್ನು ಸಂಸತ್ತಿಗೆ ತಂದಿದ್ದಾರೆ ಹಾಗೂ, ಆಡ್ವಾಣಿಯವರನ್ನು ಹೊರತು ಪಡಿಸಿ ಇತರ ಯಾವ ಹಿರಿಯ ನಾಯಕರಿಗೆ ಈ ವಿಚಾರ ತಿಳಿದಿತ್ತು ಎಂಬುದರ ಕುರಿತು ಚರ್ಚೆಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಈ ಹಗರಣದಲ್ಲಿ ಹಿರಿಯ ನಾಯಕರು ಒಳಗೊಂಡಿದ್ದಾರೆ ಎಂಬುದು ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಸಿಂಘ್ವಿ ಹೇಳಿದ್ದಾರೆ. ರಾಷ್ಟ್ರೀಯ ವಿರೋಧ ಪಕ್ಷ ಎಂದು ಹೇಳಿರುವ ಪಕ್ಷದೊಳಗೆ ನೀತಿ ಎಂಬುದು ಎಲ್ಲಿದೆ ಮತ್ತು ಅವರಿಗೆ ನೈತಿಕತೆಯನ್ನು ಬೋಧಿಸುವ ಮುಖ ಎಲ್ಲಿದೆ ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.
ಜನತೆಯನ್ನು ವಂಚಿಸಿರುವುದಕ್ಕಾಗಿ ಬಿಜೆಪಿಯು ದೇಶದ ಜನತೆಯಿಂದ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಎಂದು ವಕ್ತಾರರು ಒತ್ತಾಯಿಸಿದ್ದಾರೆ.