ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಕರ್ನೂಲ್ ಜಿಲ್ಲೆಯ ಸಮೀಪ ಸಂಪರ್ಕ ಕಡಿದುಕೊಂಡಿದ್ದು ಅವರು ಎಲ್ಲಿದ್ದಾರೆಂಬುದು ಇನ್ನೂ ಪತ್ತೆಯಾಗದೆ ಎಲ್ಲೆಡೆ ಆತಂಕ ಮೂಡಿದೆ. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ದುರ್ಗಮಪ್ರದೇಶದಲ್ಲಿ ಇಳಿದಿರಬಹುದು ಎಂದು ಊಹಿಸಲಾಗಿದೆ. ಸೇನಾ ಹೆಲಿಕಾಫ್ಟರ್‌ಗಳು ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್‌ಗಳು ಪತ್ತೆ ಕಾರ್ಯ ಮುಂದುವರಿಸಿವೆ.
ಮುಖ್ಯಮಂತ್ರಿಗಳು ಕರ್ನೂಲ್‌ನಿಂದ ಚಿತ್ತೂರಿಗೆ ಹೆಲಿಕಾಫ್ಟರ್ ತೆರಳುತ್ತಿದ್ದ ವೇಳೆ ಹವಾಮಾನ ವೈಪರಿತ್ಯದಿಂದಾಗಿ ಸಂಪರ್ಕ ಕಡಿದುಕೊಂಡಿತ್ತು. ಅದು ಕರ್ನೂಲ್ ಸಮೀಪದ ಪಾಮುಲ ಪಾಡು ಎಂಬಲ್ಲಿ ತುರ್ತು ಭೂಸ್ಪರ್ಷ ಮಾಡಿತ್ತು ಎಂಬುದಾಗಿ ಪ್ರಾಥಮಿಕ ವರದಿಗಳು ಹೇಳಿದ್ದವು.
ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ ಕಾಫ್ಟರ್‍ನ ಸಂಪರ್ಕ ಕಡಿಯುತ್ತಲೇ ನಾಲ್ಕು ಸೇನಾ ಹೆಲಿಕಾಫ್ಟರ್‌ಗಳು ಪತ್ತೆಕಾರ್ಯಕ್ಕೆ ಮುಂದಾಗಿತ್ತು. ಇವುಗಳು ಮುಖ್ಯಮಂತ್ರಿ ಇದ್ದ ಹೆಲಿಕಾಫ್ಟರ್ ಅನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಮುಖ್ಯಮಂತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದ್ದು, ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂಬುದಾಗಿ ಇತ್ತೀಚಿನ ವರದಿಗಳು ತಿಳಿಸಿವೆ. ಅರಣ್ಯಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಅವರ ಭದ್ರತೆಯ ದೃಷ್ಟಿಯಿಂದ ಅವರು ಎಲ್ಲಿದ್ದಾರೆ ಎಂಬ ವಿಚಾರವನ್ನು ಅಧಿಕಾರಿಗಳು ಹೊರಗೆಡಹಿಲ್ಲ. ಹೈದರಾಬಾದಿನಿಂದ ಸುಮಾರು 400 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಅವರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಲಾಗಿತ್ತಾದರೂ ಅದೀಗ ಸುಳ್ಳಾಗಿದೆ.
ಹೈದರಾಬಾದಿನಿಂದ ನಸುಕಿನಲ್ಲಿ ಹೊರಟಿದ್ದ ರೆಡ್ಡಿ ಅವರು ಚಿತ್ತೂರಿಗೆ ಮುಂಜಾನೆ 10 ಗಂಟೆಗೆ ತಲುಪಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಫ್ಟರ್ ರಾಡಾರ್ ಸಂಪರ್ಕ ಕಳೆದುಕೊಂಡಿದ್ದು, ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಾಗಿಲ್ಲ. ಮುಖ್ಯಮಂತ್ರಿಗಳು ಯಾವುದಾದರೂ ಹಳ್ಳಿಗಳಲ್ಲಿ ಪತ್ತೆಯಾದರೆ ಆ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಲಾಗದೆ.
ಮುಖ್ಯಮಂತ್ರಿಗಳ ಜತೆಯಲ್ಲಿ ಆಂಧ್ರದ ವಿಶೇಷ ಕಾರ್ಯದರ್ಶಿ ಸುಬ್ರಮಣಿಯಂ ಜತೆಗಿದ್ದರು.