ಹೈದರಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 09:49 IST )
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಕೆ. ರೋಸಯ್ಯ ಅವರನ್ನು ಉಸ್ತುವಾರಿ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ.
ರೋಸಯ್ಯ ಅವರ ಹಿರಿತನದ ಹಿನ್ನೆಲೆಯಲ್ಲಿ ಅವರನ್ನು ತತ್‌ಕ್ಷಣಕ್ಕೆ ಕಾಂಗ್ರೆಸ್ ಹೈ ಕಮಾಂಡ್ ಅವರನ್ನು ಉಸ್ತುವಾರಿ ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ರೋಸಯ್ಯ ಅವರು ರೆಡ್ಡಿ ಸಂಪುಟದಲ್ಲಿ ದ್ವಿತೀಯ ಸ್ಥಾನ ಪಡೆದಿರಲಿಲ್ಲ. ರೆಡ್ಡಿ ಅವರು ಚೆಲ್ಲಮ್ಮ (ಪ್ರೀತಿಯ ತಂಗಿ) ಎಂದೇ ಕರೆಯಲ್ಪಡುವ ಗೃಹ ಸಚಿವೆ ಸಬಿತಾ ರೆಡ್ಡಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಗೃಹಿಣಿಯಾಗಿದ್ದ ಸಬಿತಾ ಅವರು ತಮ್ಮ ಪತಿಯ ಮರಣಾನಂತರ ರಾಜಕೀಯಕ್ಕೆ ಬಂದಿದ್ದರು. ಅವರು ಅನಧಿಕೃತವಾಗಿ ರಾಜಶೇಖರ ರೆಡ್ಡಿ ಅವರ ಸಂಪುಟದಲ್ಲಿ ನಂ. 2 ಸ್ಥಾನ ಪಡೆದಿದ್ದರು.
ಪುತ್ರನಿಗೆ ಪಟ್ಟಾಭಿಷೇಕಕ್ಕೆ ಒತ್ತಾಯ ಈ ಮಧ್ಯೆ, ಮೃತ ರಾಜಶೇಖರ ರೆಡ್ಡಿ ಪುತ್ರ ಸಂಸದ ಜಗನ್‌ಮೋಹನ್ ಅವರನ್ನು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯನ್ನಾಗಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ರೆಡ್ಡಿ ಅವರ ವಿರೋಧಿ ಬಣವು ಈ ಸಂದರ್ಭವನ್ನು ಬಳಸಿಕೊಂಡು, ತಮ್ಮ ಕೈಬಲಪಡಿಸಬಹುದೆಂಬ ಹಿನ್ನೆಲೆಯಲ್ಲಿ ರೆಡ್ಡಿ ನಿಷ್ಠರು ಜಗನ್ ಮೋಹನ್ ಅವರನ್ನು ಮುಖ್ಯಮಂತ್ರಿಯಾಗಿಸಬೇಕು ಎಂಬ ಚಳುವಳಿಗೆ ಮುಂದಾಗಿದ್ದಾರೆ.
ರಾಜಶೇಖರ ರೆಡ್ಡಿ ಅವರ ನಿಷ್ಠ ಶಾಸಕರು ಇದೀಗಾಗಲೇ ಶಾಸಕರ ಸಹಿ ಸಂಗ್ರಕ್ಕೆ ಮುಂದಾಗಿದ್ದು, ಜಗನ್ ಮೋಹನ್ ಅವರನ್ನು ಮುಖ್ಯಮಂತ್ರಿಯಾಗಿಸಲು ಬೆಂಬಲಿಗ ಶಾಸಕರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.