ನಾಗರಿಕ ವಾಯುಯಾನದ ಪ್ರಧಾನ ನಿರ್ದೇಶನಾಲಯವು(ಡಿಜಿಸಿಎ) ವೈ.ಎಸ್. ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಅಪಘಾತದ ಕುರಿತು ಇದೀಗಾಗಲೇ ತನಿಖೆ ಆರಂಭಿಸಿದೆ. ಈ ಅಪಘಾತದಲ್ಲಿ ರೆಡ್ಡಿ ಸೇರಿದಂತೆ ಒಟ್ಟು ಐದು ಮಂದಿ ಸಾವನ್ನಪ್ಪಿದ್ದರು.
"ಡಿಜಿಸಿಎಯು ಸಮಗ್ರ ತನಿಖೆಯನ್ನು ಆರಂಭಿಸಿದ್ದು, ಅಪಘಾತದ ಕಾರಣದ ಪತ್ತೆಗೆ ಮುಂದಾಗಿದೆ. ಆದರೆ ಪ್ರಾಥಮಿಕ ವರದಿಗಳ ಪ್ರಕಾರ ಕೆಟ್ಟ ಹವಾಮಾನ ಅಪಘಾತಕ್ಕೆ ಕಾರಣ" ಎಂಬುದಾಗಿ ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರೆಡ್ಡಿ ಹಾಗೂ ಇತರರ ಸಾವಿಗೆ ಸಂತಾಪ ಸೂಚಿಸಿದ ಅವರು, ಮುಖ್ಯಮಂತ್ರಿ ರೆಡ್ಡಿ ಒಬ್ಬ ಅದ್ಭುತ ವ್ಯಕ್ತಿಯಾಗಿದ್ದು ರಾಷ್ಟ್ರವು ಒಬ್ಬ ಮಹಾನ್ ನಾಯಕನನ್ನು ಕಳೆದುಕೊಂಡಿದೆ ಎಂದು ಅವರು ಶೋಕವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಾಗುತ್ತಿದ್ದ ಅವಳಿ ಎಂಜಿನ್ ಹೊಂದಿದ್ದ ಬೆಲ್-430 ಹೆಲಿಕಾಫ್ಟರ್‌ನ ದೃಢಪತ್ರಿಕೆಯು ಬರುವ ವರ್ಷದ ಡಿಸೆಂಬರ್ ತನಕ ಸಿಂಧುವಾಗಿದೆ. ಮತ್ತು ಅವರೊಂದಿದ್ದ ಇಬ್ಬರು ಪೈಲಟ್‌ಗಳು ಸುದೀರ್ಘ ಅನುಭವ ಹೊಂದಿದ್ದು ಪರಿಣತರಾಗಿದ್ದರು ಎಂದು ಹೇಳಿದ್ದಾರೆ.
ಅಪಘಾತಕ್ಕೀಡಾಗಿದ್ದ ಕಾಫ್ಟರ್‌ಗೆ ಹವಾಮಾನ ರಾಡಾರ್ ಅಳವಡಿಕೆಯಾಗಿದ್ದು. ಅದು ಕತ್ತಲಲ್ಲೂ ಹಾರಾಡುವ ತಾಂತ್ರಿಕ ಶಕ್ತಿ ಹೊಂದಿತ್ತು ಎಂಬುದಾಗಿ ಅವರು ಹೇಳಿದ್ದಾರೆ.
ಅದಾಗ್ಯೂ, ಕಾಫ್ಟರ್ ಇನ್‌ಸ್ಟ್ರುಮೆಂಟ್ ನಿರ್ದೇಶನಕ್ಕೆ ಬದಲಾಗಿ ವಿಶುವಲ್ ಫ್ಲೈಟ್ ರೂಲ್ ಪ್ರಕಾರ ಕಾರ್ಯಾಚರಿಸುತ್ತಿತ್ತು. ಇದು ಪೈಲಟ್ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ ಅವರು ತನಿಖೆಯಿಂದ ನಿಖರ ಮಾಹಿತಿ ಲಭಿಸಬೇಕಾಗಿದೆ ಎಂದು ಹೇಳಿದ್ದಾರೆ.