ಹೈದರಾಬಾದ್, ಗುರುವಾರ, 3 ಸೆಪ್ಟೆಂಬರ್ 2009( 20:24 IST )
WD
ಆಂಧ್ರಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಹೈದರಾಬಾದಿನಿಂದ ಚಿತ್ತೂರಿಗೆ ತೆರಳುತ್ತಿದ್ದ ಹೆಲಿಕಾಫ್ಟರ್ ತನ್ನ ಹಾದಿಯಿಂದ 18 ಕಿಲೋಮೀಟರ್ ಪೂರ್ವಕ್ಕೆ ನಲ್ಲಾಮಲ್ಲಾ ಅರಣ್ಯದ ರುದ್ರಕೋಡೂರು ಸಮೀಪ ಹಾದಿತಪ್ಪಿದ್ದು, ಬಳಿಕ ಬೆಟ್ಟಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತ್ತು.
"ಬೆಟ್ಟಕ್ಕೆ ಬಡಿದ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿ ಸ್ಫೋಟಗೊಂಡಿತು. ಕಾಫ್ಟರ್‌ನಲ್ಲಿದ್ದ ಎಲ್ಲಾ ಐದು ಮಂದಿಯೂ ಸಾವನ್ನಪ್ಪಿದ್ದು ಅರೆವಾಸಿ ಸುಟ್ಟುಹೋಗಿದ್ದಾರೆ" ಎಂಬುದಾಗಿ ಉಸ್ತುವಾರಿ ಮುಖ್ಯಮಂತ್ರಿ ಕೆ. ರೋಸಯ್ಯ ಹಾಗೂ ಮುಖ್ಯ ಕಾರ್ಯದರ್ಶಿ ಪಿ. ರಮಾಕಾಂತ್ ರೆಡ್ಡಿ ಅವರು ಗುರುವಾರ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಚಿದಂಬರಂ ಅವರೂ, ಮೃತದೇಹಗಳು ಸುಟ್ಟು ಕರಕಾಗಿವೆ ಎಂದು ಹೇಳಿದ್ದಾರೆ.
ದಟ್ಟವಾಗಿ ಕವಿದ ಮೋಡ ಹಾಗೂ ಕೆಟ್ಟ ಹವಾಮಾನದ ಕಾರಣ ಹೆಲಿಕಾಫ್ಟರ್ ಕಮರಿಗೆ ಬಡಿದು ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಕಾಫ್ಟರ್‌ನ ಬಾಲದ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗಗಳು ಚೂರುಚೂರಾಗಿ ಹೋಗಿದೆ. ರುದ್ರಕೂಡೂರಿನಿಂದ 10 ಕಿಲೋಮೀಟರ್ ದೂರದ ದಟ್ಟಾರಣ್ಯದಲ್ಲಿ ಈ ಅಪಘಾತ ಸಂಭವಿಸಿದ್ದು, ಕಮಾಂಡೋಗಳು ಪರಿಹಾರ ಕಾಫ್ಟರ್‌ನಿಂದ ಹಗ್ಗದ ಮೂಲಕ ಕೆಳಗಿಳಿದಿದ್ದರು.
"ಮೊದಲಿಗೆ ಮೂರು ದೇಹಗಳು ಪತ್ತೆಯಾಗಿದ್ದವು. ಬಳಿಕ ಮತ್ತೊಂದು ದೇಹ ಸಿಕ್ಕಿತ್ತು. ಐದನೆ ದೇಹದ ಪತ್ತೆಗೆ ಕೊಂಚಕಾಲ ಹಿಡಿಯಿತು. ಅವರ ದೇಹಗಳನ್ನು ಉಡುಪುಗಳ ಮೂಲಕ ಪತ್ತೆಮಾಡಲಾಯಿತು" ಎಂಬುದಾಗಿ ಡಿಜಿಪಿ ಎಸ್.ಎಸ್.ಪಿ. ಯಾದವ್ ಅವರು ಹೇಳಿದ್ದಾರೆ.