ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಂಧ್ರ ಮುಖ್ಯಮಂತ್ರಿ ಅವರ ದುರಂತ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕ್ರಿಯಾಶೀಲ ನಾಯಕರಾಗಿದ್ದ ಅವರು ರೈತರು ಹಾಗೂ ದುರ್ಬಲ ವರ್ಗದ ಜನತೆಯ ಕಲ್ಯಾಣಕ್ಕಾಗಿ ದುಡಿದು ಇತರರಿಗೆ ಆದರ್ಶಪ್ರಾಯರಾಗಿದ್ದರು ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ರಷ್ಯಾ ಭೇಟಿಯಲ್ಲಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಮ್ಮ ಸಂದೇಶದಲ್ಲಿ, "ರೆಡ್ಡಿ ಅವರೊಬ್ಬ ಕ್ರಿಯಾಶೀಲ ನಾಯಕರಾಗಿದ್ದು ಆಂಧ್ರಪ್ರದೇಶದ ಜನತೆಯ ಕಲ್ಯಾಣಕ್ಕಾಗಿ ದುಡಿದಿದ್ದರು" ಎಂಬುದಾಗಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ರೆಡ್ಡಿಯವರ ಸಾವನ್ನು ಇದೊಂದು ವೈಯಕ್ತಿಕ ನಷ್ಟ ಎಂದು ಬಣ್ಣಿಸಿದ ಪ್ರಧಾನಿ ಮನಮೋಹನ್ ಸಿಂಗ್, ರೆಡ್ಡಿ ಅವರೊಬ್ಬ ಆದರ್ಶಮಯ ನಾಯಕ ಎಂಬುದಾಗಿ ಗುಣಗಾನ ಮಾಡಿದ್ದಾರೆ.
ರೆಡ್ಡಿ ಅವರು ವಿಶೇಷವಾಗಿ ಬಡಜನತೆ ಹಾಗೂ ಅವಕಾಶ ವಂಚಿತರು ಸೇರಿದಂತೆ ಜನಸಾಮಾನ್ಯರಿಗಾಗಿ ದುಡಿದಿದ್ದರು ಎಂದು ಪ್ರಧಾನಿ ಹೇಳಿದ್ದಾರೆ. "ಅವರೊಬ್ಬ ಬೆಲೆಬಾಳುವ ಸಹೋದ್ಯೋಗಿಯಾಗಿದ್ದು, ತಾನು ಬೆಂಬಲ ಹಾಗೂ ಸಲಹೆಸೂಚನೆಗಳಿಗೆ ಅವರನ್ನು ಅವಲಂಭಿಸಿದ್ದೆ" ಎಂಬುದಾಗಿ ರೆಡ್ಡಿ ಅವರ ಪತ್ನಿ ವಿಜಯ ಲಕ್ಷ್ಮಿಯವರಿಗೆ ನೀಡಿರುವ ಸಂದೇಶದಲ್ಲಿ ಪ್ರಧಾನಿ ತಿಳಿಸಿದ್ದಾರೆ.
ತಾನು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಮರಳಿ ಅಧಿಕಾರಕ್ಕೆ ತಂದು ತೋರಿಸುತ್ತೇನೆ ಎಂದು ಹೇಳಿದ್ದ ರಾಜಶೇಖರ ರೆಡ್ಡಿ ಅದನ್ನು ಮಾಡಿ ತೋರಿದ್ದರು ಎಂದು ಸೋನಿಯಾ ನುಡಿದರು. ಅವರು ತಮ್ಮ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಅಧಿಕಾರಕ್ಕೇರುವಂತೆ ಮಾಡಿದ್ದರು ಎಂದು ಹೇಳಿದ ಸೋನಿಯಾ ಅವರ ಸಾವು ಪಕ್ಷಕ್ಕೆ ಅತಿದೊಡ್ಡ ನಷ್ಟವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.