ಹೈದರಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 15:43 IST )
ಆಂಧ್ರಪ್ರದೇಶ ಕಂಡ ಅಪ್ರತಿಮ ಜನನಾಯಕ, ತಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ಕಳೆದು ಕೊಂಡ ಹಲವು ಅಭಿಮಾನಿಗಳು ಜೀವಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಸಮೂಹ ಸನ್ನಿಯಂತೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು ಖಾಸಗಿ ವಾಹಿನಿಗಳ ಪ್ರಕಾರ ಸಾವಿನ ಸಂಖ್ಯೆ ಶತಕ ದಾಟಿದ್ದು ಸುಮಾರು 119ನ್ನು ತಲುಪಿದೆ. ದುರ್ಗಮ ಪ್ರದೇಶಗಳಿಂದ ಮಾಹಿತಿಗಳು ಇನ್ನಷ್ಟೆ ಬರಬೇಕಿದೆ.
ಮುಖ್ಯಮಂತ್ರಿಯವರ ಸಾವಿನ ಸುದ್ದಿ ಭಿತ್ತರವಾಗುತ್ತಿರುವಂತೆ ಇದನ್ನು ಕೇಳಿ ದುಃಖಭರಿಸಲಾಗದೆ ಕೆಲವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವು ಹುಚ್ಚು ಅಭಿಮಾನಿಗಳು ತಮ್ಮ ನಾಯಕ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿಯುತ್ತಲೇ ಆತ್ಮಹತ್ಯೆ ಮಾಡಿಕೊಂಡು ತಮ್ಮ ನಾಯಕನ ಹಾದಿಯನ್ನೇ ಹಿಡಿದಿರುವ ದಾರುಣ ಘಟನೆಗಳು ಸಂಭವಿಸಿವೆ.
ಕೆಲವರು ಟಿವಿ ನೋಡುತ್ತಿರುವಂತೆ, ಪತ್ರಿಕೆ ಓದುತ್ತಿರುವಂತೆ ಹಾಗೂ ಕೆಲವು ದುರ್ಗಮ ಪ್ರದೇಶಗಳಲ್ಲಿರುವವರು ಇತರರಿಂದ ಈ ಸುದ್ದಿ ಕೇಳುತ್ತಿರುವಂತೆ ಕುಸಿದು ಬಿದ್ದಿರುವ ಘಟನೆ ಸಂಭವಿಸಿದೆ. ರೆಡ್ಡಿ ಸಾವಿನಿಂದಾಗಿ ದಿಕ್ಕು ತೋಚದಂತಾಗಿರುವ ಅಭಿಮಾನಿಗಳು ಆತ್ಮಹತ್ಯೆಗೂ ಶರಣಾಗಿರುವುದು ರೆಡ್ಡಿ ಮೇಲಿನ ಪ್ರೀತಿಯನ್ನು ತೋರುತ್ತದೆ.
ರಾಜ್ಯದ 20 ಜಿಲ್ಲೆಗಳಲ್ಲೂ ಸಾವುಗಳು ಸಂಭವಿಸಿದೆ. ವಾರಂಗಲ್ 18, ಪಶ್ಚಿಮ ಗೋದಾವರಿ 14, ಕಮ್ಮಂ 7, ನಲ್ಗೊಂಡ 6, ಪೂರ್ವಗೋದಾವರಿ 3, ಮೆಹಬೂಬ್ ನಗರ 5, ವಿಶಾಖಪಟ್ಟಣಂ 7, ಅನಂತಪುರಂ 5, ಕೃಷ್ಣ 5, ಮೇಧಕ್ 5, ವಿಜಯನಗರ 6, ಚಿತ್ತೂರು 4, ಕರೀಂನಗರ 4, ಕರ್ನೂಲು 3 ಹಾಗೂ ಪ್ರಕಾಶಾಂ, ನೆಲ್ಲೂರು, ಆದಿಲ್ ಬಾದ್, ಹೈದರಾಬಾದ್, ಶ್ರೀಕಾಕುಳಂ, ಕಡಪ್ಪ ತಲಾ ಒಬ್ಬೊಬ್ಬರು ಸೇರಿದಂತೆ ರಾಜ್ಯ 20 ಜಿಲ್ಲೆಗಳಲ್ಲಿ ಒಟ್ಟು 119 ಮಂದಿ ಇಹಲೋಕ ತ್ಯಜಿಸಿದ್ದಾರೆ.
ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಆಪಘಾತಕ್ಕೀಡಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಐದು ಮಂದಿ ಸಾವನ್ನಪ್ಪಿದ್ದಾರೆ ಎಂಬ ದುರಂತ ಸುದ್ದಿ ಗುರುವಾರ ಮುಂಜಾನೆ ಹೊರಬೀಳುತ್ತಲೇ ಹಲವಾರು ಮಂದಿ ಹೃದಯಾಘಾತಕ್ಕೀಡಾಗಿದ್ದರು.
ಜಗನ್ ಮೋಹನ್ ಮನವಿ ಈ ಮಧ್ಯೆ ತಮ್ಮ ತಂದೆಯ ಸಾವಿನಿಂದ ದುಃಖ ಪೀಡಿತರಾಗಿರುವ ಜಗನ್ ಮೋಹನ್ ಅವರು, ಆತ್ಮಹತ್ಯೆ ಮಾಡಿಕೊಳ್ಳದಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯಾರೂ ವಿಪರೀತದ ನಿರ್ಧಾರ ಕೈಗೊಳ್ಳಬೇಡಿ, ಧೈರ್ಯ ತಂದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ರೆಡ್ಡಿಯವರ ಆತ್ಮಕ್ಕೆ ಶಾಂತಿಯನ್ನು ಕೋರಿ ಎಂಬುದಾಗಿ ವಿನಂತಿಸಿಕೊಂಡಿದ್ದಾರೆ.